ನವದೆಹಲಿ: ಕ್ರಿಕೆಟರ್ ರಿಷಭ್ ಪಂತ್ ಅಪಘಾತ ಮತ್ತು ಇತರ ಕೆಲವು ಕ್ರೈಮ್ ಸ್ಟೋರಿಗಳ ಕುರಿತು ಮಾಡಲಾದ ಕವರೇಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ಕಾಯ್ದೆಯಡಿ ರೂಪಿಸಲಾಗಿರುವ ಕಾರ್ಯಕ್ರಮಗಳ ಸಂಹಿತೆಯನ್ನು (Programme Code) ಮಾಧ್ಯಮ ಸಂಸ್ಥೆಗಳು ಪಾಲಿಸಬೇಕು ಎಂದು ಹೇಳಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಾವು ಸೇರಿದಂತೆ ಅಪಘಾತಗಳು-ಹಿಂಸೆ, ಅಪರಾಧ ಸುದ್ದಿಗಳನ್ನು ವರದಿ ಮಾಡುವಾಗ ಟೆಲಿವಿಷನ್ ಚಾನೆಲ್‌ಗಳು, ಕೇಬಲ್ ಟೆಲಿವಿಷನ್ ನೆಟ್ವರ್ಕ್(ನಿಯಂತ್ರಣ) ಕಾಯ್ದೆಯ ಅನುಗುಣವಾಗಿ ಸಂಹಿತಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಕಾರು ಅಪಘಾತ, ಮೃತ ದೇಹಗಳ ದುಃಖದ ಚಿತ್ರಗಳನ್ನು ಪ್ರಸಾರ ಮಾಡುವುದು ಮತ್ತು ಐದು ವರ್ಷದ ಬಾಲಕನನ್ನು ಥಳಿಸುವ ಕವರೇಜ್ ಉಲ್ಲೇಖಿಸಿ, ಈ ಸಂಬಂಧ ಮಾಡಲಾದ ವರದಿಗಳು ಕೀಳು ಅಭಿರುಚಿಯಿಂದ ಕೂಡಿದ್ದವು ಮತ್ತು ಸಭ್ಯತೆಯನ್ನು ಮೀರಿದ್ದವು ಎಂದು ಹೇಳಿದೆ.
ಬಹಳಷ್ಟು ಸಂದರ್ಭದಲ್ಲಿ ಮಾಧ್ಯಮ ಸಂಸ್ಥಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳನ್ನು ಬಳಸಿಕೊಂಡು ಪ್ರಸಾರ ಮಾಡುತ್ತವೆ. ಈ ಬಗ್ಗೆ ಸಂಪಾದಕೀಯ ಪರಿಶೀಲನೆ ಅಗತ್ಯ ಎಂದು ಸಚಿವಾಲಯವು ತನ್ನ ಸಲಹಾರೂಪದ ಎಚ್ಚರಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | ರಾಹುಲ್ ಗಾಂಧಿ ವಿಡಿಯೋ ಪ್ರಸಾರ; ಸುದ್ದಿ ನಿರೂಪಕನ ಮನೆಯೆದುರು 2 ರಾಜ್ಯಗಳ ಪೊಲೀಸರಿಂದ ಹೈಡ್ರಾಮಾ