ನವದೆಹಲಿ: ಭಾರತದಲ್ಲಿ ಕಾರುಗಳಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ (Seat Belt) ಹಾಕಿಕೊಳ್ಳುವುದು ಕಡ್ಡಾಯವಾಗಿದೆ. ಸೀಟ್ ಬೆಲ್ಟ್ ಹಾಕದೆಯೇ ಪ್ರಯಾಣ ಮಾಡಿದರೆ ಅವರಿಗೆ ಸರ್ಕಾರ ದಂಡವನ್ನೂ ವಿಧಿಸುತ್ತದೆ. ಕಾರುಗಳಲ್ಲೂ ಕೂಡ ಸೀಟ್ ಬೆಲ್ಟ್ ಹಾಕದಿದ್ದರೆ ಅಲರಾಂ ಹೊಡೆದುಕೊಳ್ಳಲಾರಂಭಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಲರಾಂ ನಿಲ್ಲಿಸುವುದಕ್ಕೆಂದೇ ಕೆಲವು ಕ್ಲಿಪ್‌ಗಳನ್ನು ಆನ್‌ಲೈನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರ ಅದರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಸೀಟ್ ಬೆಲ್ಟ್ ಅಲರಾಂ ಸ್ಟಾಪರ್ ಕ್ಲಿಪ್‌ಗಳನ್ನು ಅಮೆಜಾನ್, ಮೀಶೋ, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮತ್ತು ಶಾಪ್‌ಕ್ಲೂಸ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ) ಐದೂ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಈ ಕೂಡಲೇ ಈ ಕ್ಲಿಪ್‌ಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: Viral News : ಬರ್ತ್‌ಡೇ ಆಚರಿಸಿಕೊಳ್ಳುತ್ತಿದೆ ವಿಶ್ವದ ಅತ್ಯಂತ ಹಿರಿಯ ನಾಯಿ! ಇದರ ವಯಸ್ಸೆಷ್ಟು ಗೊತ್ತಾ?
“ಸಾರ್ವಜನಿಕರ ಪ್ರಾಣಕ್ಕೆ ಆಗುವ ಮೌಲ್ಯಯುತವಾದ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿಪಿಎ ಆನ್‌ಲೈನ್ ಮಾರುಕಟ್ಟೆಗಳಿಗೆ ಈ ಸೂಚನೆ ಕೊಟ್ಟಿದೆ. ಕಾರಿನ ಸೀಟ್ ಬೆಲ್ಟ್ ಅಲಾರಾಂ ಸ್ಟಾಪರ್‌ಗಳ ತಯಾರಿಕೆ ಅಥವಾ ಮಾರಾಟದಿಂದ ಸಂಸ್ಥೆಗಳು ದೂರವಿರಬೇಕು. ಹಾಗೆಯೇ ಆ ರೀತಿ ಸಾಮಾಗ್ರಿ ತಯಾರಿಸಿ, ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಎಚ್ಚರಿಸಿದೆ.
ಹಾಗೆಯೇ, “ಈ ರೀತಿಯ ಅಲಾರಾಂ ಸ್ಟಾಪರ್‌ಗಳನ್ನು ಬಳಸಿದಲ್ಲಿ ಮೊಟಾರು ವಿಮಾ ಪಾಲಿಸಿಗಳನ್ನು ಪಡೆದುಕೊಳ್ಳಲು ತೊಂದರೆಯಾಗಲಿದೆ. ವಿಮಾ ಕಂಪನಿಯು ಹಕ್ಕುದಾರರ ನಿರ್ಲಕ್ಷ್ಯವನ್ನು ಉಲ್ಲೇಖಿಸಿ ಕ್ಲೈಮ್ ಅನ್ನು ನಿರಾಕರಿಸಬಹುದು. ಹಾಗೆಯೇ ಸೀಟ್ ಬೆಲ್ಟ್ ಹಾಗೂ ಏರ್‌ಬ್ಯಾಗ್‌ಗಳಿಂದಾಗಿ ಕಾರಿನಲ್ಲಿರುವವರು ಬಲವಾದ ಹೊಡೆತಗಳಿಂದ ತಪ್ಪಿಸಿಕೊಳ್ಳಬಹುದು” ಎಂದೂ ಸರ್ಕಾರವು ಎಚ್ಚರಿಕೆಯಲ್ಲಿ ತಿಳಿಸಿದೆ.