ಚಂಡೀಗಢ: ಇಲ್ಲಿನ ಯೂನಿವರ್ಸಿಟಿ ಹಾಸ್ಟೆಲ್ನಲ್ಲಿರುವ ಒಬ್ಬಳು ವಿದ್ಯಾರ್ಥಿ ತನ್ನೊಂದಿಗೆ ಇದ್ದ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೊವನ್ನು ರೆಕಾರ್ಡ್ ಮಾಡಿ ಬಾಯ್ಫ್ರೆಂಡ್ಗೆ ಎಂಎಂಎಸ್ ಮಾಡಿದ್ದಾಳೆ. ನಂತರ ಆತ ಆ ವಿಡಿಯೋಗಳನ್ನು ಅಡಲ್ಟ್ ವೆಬ್ಸೈಟ್ಗೆ ಹಾಕಿದ್ದಲ್ಲದೆ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ ಎಂಬ ಸುದ್ದಿ ಇಂದು ಬೆಳ್ಳಂಬೆಳಗ್ಗೆ ಬಂದಿತ್ತು. ಆದರೆ ನಂತರ ‘ಇಲ್ಲ, 60 ವಿದ್ಯಾರ್ಥಿನಿಯರ ವಿಡಿಯೋಗಳೆಲ್ಲ ವೈರಲ್ ಆಗಿಲ್ಲ. ಒಬ್ಬಳೇ ಹುಡುಗಿ, ಅಂದರೆ ಯಾರು ವಿಡಿಯೋವನ್ನು ಎಂಎಂಎಸ್ ಮಾಡಿದ್ದಳೋ ಅವಳದ್ದೇ ಅಶ್ಲೀಲ ವಿಡಿಯೋ ಮಾತ್ರ ಲೀಕ್ ಆಗಿದೆ’ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು.
ಇದೀಗ ಚಂಡೀಗಢ ಯೂನಿವರ್ಸಿಟಿ ವಿಡಿಯೋ ಲೀಕ್ ಬಗ್ಗೆ ಪ್ರತಿಕ್ರಿಯೆ ನೀಡಿದೆ. ‘ವಿಶ್ವ ವಿದ್ಯಾಲಯದ ಯಾವುದೇ ವಿದ್ಯಾರ್ಥಿನಿಯೂ ಬೇರೆಯವರ ಅಶ್ಲೀಲ ವಿಡಿಯೋ ಚಿತ್ರೀಕರಿಸಿಲ್ಲ. ಈಗ ಬಂಧಿತಳಾಗಿರುವ ವಿದ್ಯಾರ್ಥಿನಿ ತನ್ನದೇ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಫೋನ್ನಲ್ಲಿ ಚಿತ್ರೀಕರಿಸಿಕೊಂಡು, ಬಾಯ್ಫ್ರೆಂಡ್ಗೆ ಕಳಿಸಿದ್ದಳು. 60 ವಿದ್ಯಾರ್ಥಿನಿಯರ ವಿಡಿಯೋ ಲೀಕ್ ಆಗಿದೆ ಎಂಬುದು ತಪ್ಪು ಮತ್ತು ಆಧಾರ ರಹಿತ ವರದಿ. ಹಾಗೆಲ್ಲ ಏನೂ ಆಗಿಲ್ಲ. ಆಕೆಯ ವಿಡಿಯೋ ಹೊರತಾಗಿ ಇನ್ಯಾವುದೇ ವಿಡಿಯೋವೂ ಇಲ್ಲ. ನಾವು ಪೊಲೀಸ್ ತನಿಖೆಗೆ ಸಂಪೂರ್ಣ ಸಹಕರಿಸುತ್ತೇವೆ ಎಂದು ಯೂನಿವರ್ಸಿಟಿಯ ಉಪ ಕುಲಪತಿ ಆರ್.ಎಸ್.ಬಾವಾ ತಿಳಿಸಿದ್ದಾರೆ.
ಪಂಜಾಬ್ ಡಿಜಿಪಿಗೆ ಮಹಿಳಾ ಆಯೋಗದಿಂದ ಪತ್ರ
ಚಂಡೀಗಢ ಯೂನಿವರ್ಸಿಟಿಯ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ‘ದೋಷಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ಪಂಜಾಬ್ ಡಿಜಿಪಿಗೆ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪತ್ರ ಬರೆದಿದ್ದಾರೆ. ಇದೇ ಒತ್ತಾಯವನ್ನೂ ಯೂನಿವರ್ಸಿಟಿ ಆಡಳಿತಕ್ಕೂ ಅವರು ಮಾಡಿದ್ದಾರೆ.
ಇನ್ನೊಂದೆಡೆ ಚಂಡೀಗಢ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ. ಯಾರ ವಿಡಿಯೊಗಳೂ ಲೀಕ್ ಆಗಿಲ್ಲ, ಪ್ರತಿಭಟನೆ ನಿಲ್ಲಿಸಿ ಎಂದು ಹೇಳಿದ್ದಾರೆ. ಹಾಗೇ, ಈ ಕೇಸ್ನ ಸೂಕ್ತ ತನಿಖೆ ನಡೆಸುವುದಾಗಿಯೂ ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ: Punjab MMS Scandal | ಲೀಕ್ ಆಗಿದ್ದು ಆರೋಪಿ ಹುಡುಗಿಯ ವಿಡಿಯೋ ಮಾತ್ರ; ಆತ್ಮಹತ್ಯೆ ಯತ್ನವೂ ನಡೆದಿಲ್ಲ