ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 (Chandrayana 3)ನ್ನು ಇದೇ ವರ್ಷ ಜುಲೈ 12-19ರ ಒಳಗೆ ಉಡಾವಣೆ ಮಾಡುವುದಾಗಿ ಇಸ್ರೋ (ISRO-Indian Space Research Organisation) ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದಾರೆ. ಎಲ್ಲವೂ ನಮ್ಮ ಯೋಜನೆ ಪ್ರಕಾರವೇ ನಡೆದರೆ, ಯೋಜಿತ ಪರೀಕ್ಷೆಗಳು ಸರಿಯಾದರೆ ಜು.12ರಿಂದ 19ರ ಮಧ್ಯೆ ಯಾವುದಾದರೂ ಒಂದು ದಿನ ಚಂದ್ರಯಾನ ಉಡಾವಣೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಸ್ರೋ ಮುಖ್ಯಸ್ಥ ಬಿ.ಸೋಮನಾಥ್ ಅವರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಕೊತ್ತವಾರ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಸ್ರೋದಿಂದ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಮತ್ತು ಬಾಹ್ಯಾಕಾಶ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವಾಗ ಈ ವಿಷಯ ತಿಳಿಸಿದ್ದಾರೆ. ‘ಚಂದ್ರಯಾನ-3 ಉಡಾವಣೆಗೆ ಸಂಬಂಧಪಟ್ಟ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಜೂನ್ ಅಂತ್ಯದ ವೇಳೆಗೆ ಎಲ್ಲ ಪರೀಕ್ಷೆಗಳು, ಸಿದ್ಧತೆಗಳು ಮುಕ್ತಾಯಗೊಳ್ಳುತ್ತವೆ. ಎಲ್ವಿಎಂ-3(LVM-3) ರಾಕೆಟ್ನ್ನು ಚಂದ್ರಯಾನ ಉಡಾವಣೆಗೆ ಬಳಸಲಾಗುವುದು. ಇದರ ಜೋಡಣೆ ಕಾರ್ಯ ನಡೆಯುತ್ತಿದೆ. ಎಲ್ವಿಎಂ ರಾಕೆಟ್ನ ಬಿಡಿ ಭಾಗಗಳೆಲ್ಲ ಈಗಾಗಲೇ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವನ್ನು ತಲುಪಿವೆ. ಜು.12ರಿಂದ ಜುಲೈ 19ರ ಮಧ್ಯೆಯೇ ಚಂದ್ರಯಾನ 3 ಉಡಾವಣೆಯಾಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ: Chandrayaan-3: ಚಂದ್ರಯಾನ-3 ಮಿಷನ್‌ಗೆ ಸಜ್ಜಾದ ಇಸ್ರೋ, ಯಾವಾಗ ಲಾಂಚ್?
ಚಂದ್ರಯಾನ 3ರ ಉಡಾವಣೆ ವೇಳೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಕೆಟ್ಗೆ ಅಧಿಕ ಇಂಧನ ತುಂಬಲಾಗಿದೆ ಮತ್ತು ರಾಕೆಟ್ ಲ್ಯಾಂಡ್ ಆಗುವ ಭಾಗವನ್ನು ಇನ್ನಷ್ಟು ದೃಢಗೊಳಿಸಲಾಗಿದೆ. ಹೆಚ್ಚಿನ ಶಕ್ತಿ ಉತ್ಪಾದಿಸಲು ದೊಡ್ಡ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಸೆನ್ಸರ್ (ಸಂವೇದಕ) ಇಡಲಾಗಿದೆ. ರಾಕೆಟ್ ವೇಗವನ್ನು ಅಳೆಯಲು ಲೇಸರ್ ಡಾಪ್ಲರ್ ವೆಲೋಸಿಮೆಟರ್ ಅಳವಡಿಸಲಾಗಿದ್ದು, ಇದನ್ನು ಕಳೆದ ವರ್ಷವಷ್ಟೇ ಅಭಿವೃದ್ಧಿಗೊಳಿಸಲಾಗಿದೆ. ಅಷ್ಟೇ ಅಲ್ಲ , ಚಂದ್ರನ ಮೇಲೆ ಯಾವ ಜಾಗದಲ್ಲಿ ಇಳಿಯಬೇಕು ಎಂದು ನಾವು ನಿಗದಿಪಡಿಸಿದ್ದೇವೋ, ಒಂದೊಮ್ಮೆ ರಾಕೆಟ್ ಅಲ್ಲಿ ಲ್ಯಾಂಡ್ ಆಗದೆ ಇದ್ದರೆ, ಬೇರೆ ಸ್ಥಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಮಾಡಲು ಹೊಸ ಸಾಫ್ಟ್ವೇರ್ ಮತ್ತು ಅಲ್ಗರಿದಂ ಬಳಕೆ ಮಾಡಲಾಗಿದೆ‘ ಎಂದು ಬಿ.ಸೋಮನಾಥ್ ಮಾಹಿತಿ ನೀಡಿದ್ದಾರೆ.
2019ರಲ್ಲಿ ಇಸ್ರೋ ಚಂದ್ರಯಾನ 2 ಕೈಗೊಂಡಿತ್ತು. ಯಶಸ್ವಿಯಾಗಿ ಉಡಾವಣೆಯಾದರೂ, ಲ್ಯಾಂಡರ್ ಕ್ರ್ಯಾಶ್ ಇಡೀ ಮಿಷನ್ ಫೇಲ್ ಆಗಿತ್ತು. ಸಾಫ್ಟ್ ವೇರ್ ಸಮಸ್ಯೆಯಿಂದಾಗಿ ಲ್ಯಾಂಡರ್ ನಿರ್ದಿಷ್ಟ ಗತಿಗಿಂತಲೂ ವೇಗವಾಗಿ ಲ್ಯಾಂಡ್ ಆದ ಪರಿಣಾಮ ಇಡೀ ಮಿಷನ್ ವೈಫಲ್ಯ ಕಂಡಿತ್ತು. ಈ ವೇಳೆ ಕೆ.ಶಿವನ್ ಅವರು ಇಸ್ರೋ ಮುಖ್ಯಸ್ಥರಾಗಿದ್ದರು.