ನವ ದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಬಗ್ಗೆ ಪ್ರಯಾಣಿಕರು ದೂರುತ್ತಿದ್ದಾರೆ. ಚೆಕ್ ಇನ್ಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ಮಾರುದ್ದ ಕ್ಯೂ ನಿಲ್ಲಬೇಕು. ವಿಮಾನ ಇಳಿದು ಹೊರಗೆ ಬರುವಾಗಲೂ ನೂಕು ನುಗ್ಗಲು ಉಂಟಾಗುತ್ತಿದೆ. ಒಟ್ಟಾರೆ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ವಿಪರೀತ ಆಗುತ್ತಿದೆ ಎಂದು ಹಲವು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಕೆಲವು ಫೋಟೋ-ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಹೀಗೆ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಗೊ ತನ್ನ ಪ್ರಯಾಣಿಕರಾಗಿ ಹೊಸ ಮಾರ್ಗಸೂಚಿ ಬಿಡುಗಡೆಮಾಡಿದೆ. ‘ಇಂಡಿಗೊ ವಿಮಾನದ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣಕ್ಕೆ, ವಿಮಾನ ನಿರ್ಗಮನದ ಸಮಯದ ಕನಿಷ್ಠ ಮೂರುವರೆ ಗಂಟೆ (3.5ತಾಸು) ಮೊದಲು ತಲುಪಿರಬೇಕು. ಹಾಗೇ, ಸೆಕ್ಯೂರಿಟಿ ಚೆಕ್ಗೆ ಅನುಕೂಲವಾಗುವಂತೆ, 7ಕೆಜಿ ತೂಕದವರೆಗಿನ ಲಗೇಜ್ ಮಾತ್ರ ತರಬೇಕು. ಅದರಲ್ಲೂ ಒಂದೇ ಬ್ಯಾಗೇಜ್ ಇರಬೇಕು’ ಎಂದು ಹೇಳಿದೆ.
‘ದೆಹಲಿ ಏರ್‌ಪೋರ್ಟ್‌ನಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಚೆಕ್ ಇನ್, ಬೋರ್ಡಿಂಗ್ ಪ್ರಕ್ರಿಯೆಗಳಿಗೆ ಎಂದಿಗಿಂತಲೂ ಹೆಚ್ಚಿನ ಸಮಯ ಹಿಡಿಯುತ್ತಿದೆ. ಹೀಗಾಗಿ ಪ್ರಯಾಣಿಕರು, ಅವರು ಟಿಕೆಟ್ ಮಾಡಿಸಿದ್ದ ವಿಮಾನದ ಸಮಯದ ಕನಿಷ್ಠ ಮೂರುವರೆ ತಾಸು ಮೊದಲು ಏರ್‌ಪೋರ್ಟ್‌ನಲ್ಲಿ ಇದ್ದು ಸಹಕರಿಸಬೇಕು’ ಎಂದು ಇಂಡಿಗೊ ಟ್ವಿಟರ್ನಲ್ಲಿ ತಿಳಿಸಿದೆ. ಇನ್ನು ದೆಹಲಿ ಏರ್‌ಪೋರ್ಟ್‌ನಲ್ಲಿ ಇಂಡಿಗೊ ಚೆಕ್ ಇನ್ ಪಾಯಿಂಟ್ಗಳು ಟರ್ಮಿನಲ್ 3ರ ಗೇಟ್ ನಂಬರ್ 5 ಮತ್ತು 6ರ ಸಮೀಪವೇ ಇದೆ. ಹೀಗಾಗಿ ಇಂಡಿಗೊ ಪ್ರಯಾಣಿಕರು ಈ ಟರ್ಮಿನಲ್ನ್ನು ಗೇಟ್ ನಂಬರ್ 5 ಮತ್ತು 6ರ ಮೂಲಕ ಪ್ರವೇಶಿಸಿದರೆ ತುಂಬ ಅನುಕೂಲ ಆಗುತ್ತದೆ ಎಂದೂ ವಿಮಾನ ಯಾನ ಸಂಸ್ಥೆ ತಿಳಿಸಿದೆ.
ನರಕ ಇದು ಎಂದ ಪ್ರಯಾಣಿಕರು
ದೆಹಲಿ ವಿಮಾನ ನಿಲ್ದಾಣದಲ್ಲಿ ಆಗುತ್ತಿರುವ ಜನಸಂದಣಿ ಕಳೆದ ಹಲವು ದಿನಗಳಿಂದಲೂ ಚರ್ಚೆಯಾಗುತ್ತಿದೆ. ಒಂದಷ್ಟು ಜನ ತಮಗಾದ ಅನುಭವವನ್ನೂ ಹೇಳಿಕೊಂಡಿದ್ದಾರೆ. ಮುಂಜಾನೆ 5.30ಕ್ಕೆ ಬಂದರೂ ಇಲ್ಲಿ ಜನದಟ್ಟಣೆ ಆಗುತ್ತಿದೆ. ನರಕದಂತಾಗಿದೆ ಎಂದು ಟ್ವಿಟರ್ನಲ್ಲಿ ಪೋಸ್ಟರ್ ಹಾಕಿಕೊಂಡಿದ್ದಾರೆ. ದೆಹಲಿ ಏರ್ಪೋರ್ಟ್ ಆಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಜನದಟ್ಟಣೆ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುವುದಾಗಿ ಏರ್ಪೋರ್ಟ್ ಕೂಡ ತಿಳಿಸಿದೆ.
ಇದನ್ನೂ ಓದಿ: IGI Airport | ದೆಹಲಿ ಏರ್‌ಪೋರ್ಟ್‌ನಲ್ಲಿ ಜನಜಂಗುಳಿ, ರೈಲು ನಿಲ್ದಾಣದ ರೀತಿಯ ಗದ್ದಲಕ್ಕೆ ಕಾರಣವೇನು?