ಪಾಕಿಸ್ತಾನದ ರಾಷ್ಟ್ರೀಯ ಕವಿ, ‘ಸಾರೆ ಜಹಾನ್ ಸೆ ಅಚ್ಛಾ‘ ದೇಶಭಕ್ತಿ ಗೀತೆ ಬರೆದ ಮೊಹಮ್ಮದ್ ಇಕ್ಬಾಲ್ (Muhammad Iqbal) ಅವರ ಕುರಿತಾದ ಅಧ್ಯಾಯವನ್ನು ರಾಜಕೀಯ ವಿಜ್ಞಾನ ಪಠ್ಯದಿಂದ ತೆಗೆಯಲು ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ನಿರ್ಧಾರ ಮಾಡಿದ್ದು, ಈ ಬಗ್ಗೆ ಅದು ನಿರ್ಣಯ ಅಂಗೀಕಾರ ಮಾಡಿದೆ. ದೆಹಲಿ ಯೂನಿವರ್ಸಿಟಿ ಈ ನಿರ್ಧಾರಕ್ಕೆ ಈಗಾಗಲೇ ಅನೇಕರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಇಕ್ಬಾಲ್ ಅವರು ಹುಟ್ಟಿದ್ದು 1877ರಲ್ಲಿ, ಅವಿಭಜಿತ ಭಾರತದಲ್ಲಿ. ಇವರ ಹುಟ್ಟೂರು ಸಿಯಾಲ್ಕೋಟ್ ಆಗಿದ್ದು, ಇದು ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ಹಾಗೇ, ಭಾರತ ವಿಭಜನೆ ಆಗುವುದಕ್ಕೂ ಮುನ್ನ, 1938ರಲ್ಲಿ ಇವರು ಲಾಹೋರ್ನಲ್ಲಿ ಮೃತಪಟ್ಟರು. ಭಾರತ 1947ರಲ್ಲಿ ವಿಭಜನೆ ಆಗುವುದಕ್ಕೂ ಮುಂಚೆಯೇ ಮೊಹಮದ್ ಇಕ್ಬಾಲ್ ಹುಟ್ಟಿ, ಭಾರತಕ್ಕಾಗಿಯೇ ಸಾರೆ ಜಹಾನ್ ಸೆ ಅಚ್ಛಾ ದೇಶಭಕ್ತಿ ಗೀತೆ ಬರೆದು, ಭಾರತ ವಿಭಜನೆ ಆಗುವುದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ. ಹಾಗಿದ್ದಾಗ್ಯೂ ಭಾರತ ಡಿವೈಡ್ ಆದ ಬಳಿಕ ಇವರು ಹುಟ್ಟಿದ ಊರು ಮತ್ತು ಮೃತಪಟ್ಟ ನಗರ ಎರಡೂ ಪಾಕಿಸ್ತಾನಕ್ಕೆ ಸೇರಿದ್ದರಿಂದ, ಅವರು ಪಾಕಿಸ್ತಾನದ ಕವಿ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಇಂಥ ಮೊಹಮ್ಮದ್ ಇಕ್ಬಾಲ್ ಅವರಿಗೆ ಸಂಬಂಧಪಟ್ಟ, ಮಾಡರ್ನ್ ಇಂಡಿಯನ್ ಪೊಲಿಟಿಕಲ್ ಥಾಟ್ಸ್ (Modern Indian Political Thought) ಎಂಬ ಹೆಸರಿನ ಅಧ್ಯಾಯವೊಂದು ದೆಹಲಿ ವಿಶ್ವ ವಿದ್ಯಾಲಯದ ಬಿಎ ಪದವಿಯ ಆರನೇ ಸೆಮಿಸ್ಟರ್ನ ಪಠ್ಯದಲ್ಲಿ ಇತ್ತು.
ಇದನ್ನೂ ಓದಿ: Delhi Mayor: ಇತ್ತೀಚೆಗಷ್ಟೇ ದೆಹಲಿ ಮೇಯರ್ ಗದ್ದುಗೆ ಏರಿದ್ದ ಶೆಲ್ಲಿ ಒಬೆರಾಯ್ ಮತ್ತೊಮ್ಮೆ ಮೇಯರ್ ಆಗಿ ಆಯ್ಕೆಯಾಗಿದ್ದೇಕೆ?
ಮೊಹಮ್ಮದ್ ಇಕ್ಬಾಲ್ರ ಅಧ್ಯಾಯವನ್ನು ತೆಗೆದು ಹಾಕುವಂತೆ ದೆಹಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ನಿಂದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಅದರ ಪ್ರಸ್ತಾಪವನ್ನು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ (ಎಕ್ಸಿಕ್ಯೂಟಿವ್ ಕೌನ್ಸಿಲ್) ಎದುರು ಇಟ್ಟಿದೆ. ಈ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಂತಿಮ ನಿರ್ಧಾರ ತೆಗೆದುಕೊಂಡು, ಸುತ್ತೋಲೆ ಹೊರಡಿಸಲಿದೆ. ಇದರ ಸಭೆ ಜೂನ್ 9ರಂದು ಸಭೆ ನಡೆಯಲಿದೆ. ಅಂದಹಾಗೇ, ಮೊಹಮ್ಮದ್ ಇಕ್ಬಾಲ್ ಅಧ್ಯಾಯವನ್ನು ಪಠ್ಯದಿಂದ ತೆಗೆಯುವ ನಿರ್ಧಾರವನ್ನು ಕೈಗೊಂಡಿದ್ದು, ಯೂನಿವರ್ಸಿಟಿ ಅಕಾಡೆಮಿಕ್ ಕೌನ್ಸಿಲ್ನ 1014ನೇ ಸಭೆಯಲ್ಲಿ. ಉಪಕುಲಪತಿ ಯೋಗೇಶ್ ಸಿಂಗ್ ಅವರು ಈ ನಿರ್ಣಯ ಮಂಡಿಸಿದ್ದರು. ಅದಕ್ಕೆ ಉಳಿದವರೆಲ್ಲ ಒಪ್ಪಿಕೊಂಡಿದ್ದಾರೆ.
ನಿರ್ಧಾರ ಸ್ವಾಗತಿಸಿದ ಎಬಿವಿಪಿ
ದೆಹಲಿ ಯೂನಿವರ್ಸಿಟಿಯ ಈ ನಿರ್ಧಾರಕ್ಕೆ ಈಗಾಗಲೇ ಹಲವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಅದರ ಮಧ್ಯೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಈ ಕ್ರಮವನ್ನು ಸ್ವಾಗತಿಸಿದೆ. ಮತಾಂಧ ಕವಿ, ವಿದ್ವಾಂಸ ಮೊಹಮ್ಮದ್ ಇಕ್ಬಾಲ್ ಅಧ್ಯಾಯವನ್ನು ತನ್ನ ಪೊಲಿಟಿಕಲ್ ಸೈನ್ಸ್ ಪಠ್ಯದಿಂದ ತೆಗೆದುಹಾಕಲು ದೆಹಲಿ ಯೂನಿವರ್ಸಿಟಿ ನಿರ್ಧಾರದ ಮಾಡಿದ್ದು ಸ್ವಾಗತಾರ್ಹ ಎಂದು ಹೇಳಿದೆ.