Site icon Vistara News

₹28ಕ್ಕೆ ಆಟೋ ಚಾಲಕನ ಜತೆ ಹೋರಾಡಿ ಮೃತಪಟ್ಟವನ ಕುಟುಂಬಕ್ಕೆ ಸಿಗಲಿಗೆ ₹43 ಲಕ್ಷ

chasing the auto

ಮುಂಬೈ: ಆಟೋ ಚಾಲಕನೊಬ್ಬರ ಅಜಾಕರೂಕತೆಯಿಂದ ಉಂಟಾದ ಅವಘಡದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಈಗ ಸ್ವಲ್ಪ ಸಮಾಧಾನ ಸಿಕ್ಕಿದೆ. ಮುಂಬೈನ ವಿಕ್ರೋಲಿ ನಿವಾಸಿ ಚೇತನ್‌ ಅಚಿರ್ನೇಕರ್‌ ಸಾವಿಗೆ ಆರು ವರ್ಷದ ನಂತರ ಹಣಕಾಸಿನ ನೆರವು ಸಿಕ್ಕಿದೆ.

ಆಗಿದ್ದಿಷ್ಟು. ಚೇತನ್‌ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2016ರ ಜುಲೈ 23ರ ಬೆಳಗಿನ ಜಾವ 1.30ರ ಸುಮಾರಿಗೆ ವಿಮಾನ ನಿಲ್ದಾಣದಿಂದ ಮನೆಗೆ ಆಟೋದಲ್ಲಿ ಬಂದರು. ಆಟೋ ಮೀಟರ್‌ ದರ ₹172 ಆಗಿತ್ತು. ಚೇತನ್‌ ₹200 ಕೊಟ್ಟರು. ಆಟೋ ಚಾಲಕ ಕಮಲೇಶ್‌ ಮಿಶ್ರಾ ಉಳಿದ ₹28 ಚಿಲ್ಲರೆ ಕೊಡಬೇಕಿತ್ತು. ಆದರೆ ಆತ, ತನ್ನ ಬಳಿ ಚಿಲ್ಲರೆ ಇಲ್ಲ ಎಂದು ವಾದಿಸತೊಡಗಿದ. ತಾನು ಚಿಲ್ಲರೆ ನೀಡುವುದಿಲ್ಲ ಎಂದವನೇ ಆಟೋವನ್ನು ಸ್ಟಾರ್ಟ್‌ ಮಾಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ.

ಇದನ್ನೂ ಓದಿ | ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು !

ತನ್ನ ಹಣವನ್ನು ಏಕೆ ಬಿಡಬೇಕು ಎಂದು ನಿರ್ಧರಿಸಿದ ಚೇತನ್‌, ಆಟೋವನ್ನು ಹಿಡಿಯಲು ಮುಂದಾದ. ಆದರೆ ವೇಗವಾಗಿ ತಪ್ಪಿಸಿಕೊಳ್ಳೂವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಆಟೊ ಚೇತನ್‌ ಮೇಲೆ ಬಿತ್ತು. ಮಗ ಮನೆಗೆ ಬಂದದ್ದು, ಆಟೋ ಚಾಲಕನೊಂದಿಗೆ ವಾಗ್ವಾದ ನಡೆದದ್ದು, ಕೊನೆಗೆ ಆತನ ಮೇಲೆ ಆಟೊ ಬಿದ್ದದ್ದೆಲ್ಲವನ್ನೂ ಚೇತನ್‌ ತಂದೆ ನೋಡುತ್ತಲೇ ಇದ್ದರು.ಆದರೆ ನೋಡನೋಡುತ್ತಲೇ ಆಟೊ ಚೇತನ್‌ ಮೇಲೆ ಬಿದ್ದು ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮಗ ಮೃತಪಟ್ಟಿದ್ದನ್ನು ಕಣ್ಣಾರೆ ಕಾಣುವಂತಾಯಿತು.

ವಿಮೆ ನಿರಾಕರಿಸಿದ ಕಂಪನಿ

ಚೇತನ್‌ ಸಾವಿನಿಂದ ಕುಟುಂಬ ತುಂಬಲಾರದ ನಷ್ಟವನ್ನು ಅನುಭವಿಸಿತು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಯಿತು, ಮೃತ ಚೇತನ್‌ ಮರಣೋತ್ತರ ಪರೀಕ್ಷೆಯನ್ನೂ ನಡೆಸಿ ಅಂತಿಮ ಸಂಸ್ಕಾರ ಮಾಡಲಾಯಿತು. ಮಗನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ ಕುಟುಂಬಕ್ಕೆ ಆಸರೆಯಾಗಿದ್ದವನೇ ಮೃತಪಟ್ಟಿದ್ದರಿಂದ ಮುಂದಿನ ಜೀವನ ಹೇಗೆ ಎಂಬ ಚಿಂತೆಯೂ ಶುರುವಾಯಿತು. ಆಟೋ ವಿಮೆ ಮಾಡಿಸಿದ್ದ ಫ್ಯೂಚರ್‌ ಜೆನರೇಲಿ ಇಂಡಿಯಾ ಇನ್ಶ್ಯೂರೆನ್ಸ್‌ ಕಂಪನಿಯಿಂದ ಪರಿಹಾರಕ್ಕೆ ಮೊರೆ ಹೋದರು.

ಆದರೆ ವಿಮೆ ಹಣ ನೀಡಲು ಕಂಪನಿ ನಿರಾಕರಿಸಿತು. ಇದು ಆಟೋ ಚಾಲಕ ಉದ್ದೇಶಪೂರ್ವಕವಾಗಿ ಎಸಗಿದ ಕೃತ್ಯ. ಇದು ಅಪರಾಧ ಪ್ರಕರಣವಾಗಿದ್ದು, ಅಪಘಾತವಲ್ಲ. ಹಾಗಾಗಿ ವಾಹನ ವಿಮೆ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತು. ಆದರೆ ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ತಮಗೆ ನೋವಾಗಿದೆ, ಅದಕ್ಕೆ ಪರಿಹಾರ ನೀಡಬೇಕು ಎಂದು ಚೇತನ್‌ ಕುಟುಂಬ ಪಟ್ಟು ಹಿಡಿಯಿತು.

ಅಪಘಾತ ನ್ಯಾಯಮಂಡಳಿ ಮೊರೆ

ತಮ್ಮ ಪುತ್ರನ ಸಾವಿಗೆ ಪರಿಹಾರ ಹಣವನ್ನು ನೀಡಲು ವಿಮಾ ಕಂಪನಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಚೇತನ್‌ ಕುಟುಂಬವು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಮೊರೆ ಯೋಯಿತು. ಇದೊಂದು ಅಪಘಾತ ಪ್ರಕರಣವಲ್ಲ, ಹತ್ಯೆ ಪ್ರಕರಣ ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಮಂಡಳೀ ತಳ್ಳಿಹಾಕಿತು. ಚೇತನ್‌ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಾಗೂ ಮರಣ ಪ್ರಮಾಣಪತ್ರದಲ್ಲಿ, ಮೋಟಾರು ವಾಹನ ಅಪಘಾತದಲ್ಲಿ ಉಂಟಾದ ಗಾಯದಿಂದ ಮರಣವಾಗಿದೆ ಎಂದು ತಿಳಿಸಲಾಗಿದೆ ಎಂಬುದನ್ನು ಆಧಾರವಾಗಿಸಿಕೊಂಡಿತು. ಆಟೋ ಚಾಲಕ ಅಜಾಗರೂಕತೆಯಿಂದ ಹಾಘೂ ಅತಿ ವೇಗದಿಂದ ವಾಹನ ಚಲಾವಣೆ ಮಾಡಿರುವುದು ಸ್ಪಷ್ಟವಾಗಿದೆ ಎಂದಿತು.

₹43 ಲಕ್ಷ ಪರಿಹಾರ

ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್‌ ₹15 ಸಾವಿರ ವೇತನ ಪಡೆಯುತ್ತಿದ್ದರು. ಇದರ ಆಧಾರದಲ್ಲಿ ಹಾಗೂ ಕುಟುಂಬಕ್ಕೆ ಉಂಟಾದ ಮಾನಸಿಕ ಆಘಾತವನ್ನೂ ಗಣನೆಗೆ ತೆಗೆದುಕೊಂಡು ಒಟ್ಟು ₹43 ಲಕ್ಷ ಪರಿಹಾರವನ್ನು ಘೋಷಿಸಿದೆ. ಹಾಗೆಂದು ಇಷ್ಟೂ ಹಣವನ್ನು ವಿಮಾ ಕಂಪನಿ ಮಾತ್ರವಲ್ಲ, ಆಟೋ ರಿಕ್ಷಾ ಚಾಲಕ ಕಮಲೇಶ್‌ ಮಿಶ್ರಾ ಜಂಟಿಯಾಗಿ ಪಾವತಿ ಮಾಡಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ| ಶಿವಮೊಗ್ಗದಲ್ಲಿ ಮಗುವಿನ ಪ್ರಾಣ ರಕ್ಷಿಸಿದ ಆಟೋ ಚಾಲಕ

Exit mobile version