ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾದ ಚೀತಾಗಳ ಮಧ್ಯೆ ಫೈಟ್ ಆಗಿದೆ (cheetahs Fight). ನಾಲ್ಕು ಚೀತಾಗಳು ಕಾದಾಡಿಕೊಂಡಿದ್ದು, ಅದರಲ್ಲಿ ಎರಡು ಚೀತಾಗಳು ಗಾಯಗೊಂಡಿವೆ. ಹೀಗೆ ಗಾಯಗೊಂಡ ಚೀತಾಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ಹೇಳಲಾಗಿದೆ. ಈ ಚೀತಾಗಳ ಮಧ್ಯೆ ಸ್ಥಳಕ್ಕಾಗಿ ಜಗಳ ನಡೆದಿದ್ದಾಗಿ ವಿಭಾಗೀಯ ಅರಣ್ಯಾಧಿಕಾರಿ ಪಿ.ಕೆ.ವರ್ಮಾ ತಿಳಿಸಿದ್ದಾರೆ.
ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಸಂತತಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಆಫ್ರಿಕಾದ ದೇಶಗಳಿಂದ ಚೀತಾಗಳನ್ನು ತರಲಾಗಿದೆ. ಈಗಾಗಲೇ ಎರಡು ಹಂತದಲ್ಲಿ ಒಟ್ಟು 20 ಚೀತಾಗಳನ್ನು ಭಾರತಕ್ಕೆ ತರಲಾಗಿದೆ. ಮೊದಲನೇದಾಗಿ 2022ರ ಸೆಪ್ಟೆಂಬರ್ನಲ್ಲಿ 8 ಚೀತಾಗಳನ್ನು ನಮೀಬಿಯಾದಿಂದ ತರಲಾಗಿತ್ತು. ಹಾಗೇ, ಎರಡನೇ ಹಂತದಲ್ಲಿ 2023ರ ಫೆಬ್ರವರಿಯಲ್ಲಿ 12 ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿತ್ತು. ಒಂದು ಚೀತಾ ನಾಲ್ಕು ಮರಿಗಳಿಗೂ ಜನ್ಮ ನೀಡಿತ್ತು. ಆದರೆ ಅದರಲ್ಲಿ ಮೂರು ಮರಿಗಳು ಸೇರಿ ಒಟ್ಟು ಆರು ಚೀತಾಗಳು ಮೃತಪಟ್ಟಿವೆ. ಸಶಾ ಮತ್ತು ಉದಯ್ ಚೀತಾಗಳು ಅನಾರೋಗ್ಯದಿಂದ ಹಾಗೂ ದಕ್ಷಾ ಎಂಬ ಚೀತಾ ಹೀಗೆ ಕಾಳಗದಿಂದ ಗಾಯಗೊಂಡೇ ಮೃತಪಟ್ಟಿದ್ದವು.
ಈ ಮಧ್ಯೆ ಮಂಗಳವಾರ ಮತ್ತೆ ಒಟ್ಟು ನಾಲ್ಕು ಚೀತಾಗಳು ಕಾದಾಟ ನಡೆಸಿವೆ. ನಮೀಬಿಯಾದಿಂದ ಬಂದಿರುವ ಗೌರವ್ ಮತ್ತು ಶೌರ್ಯ ಚೀತಾಗಳು, ದಕ್ಷಿಣ ಆಫ್ರಿಕಾದಿಂದ ಬಂದಿರುವ ಅಗ್ನಿ ಮತ್ತು ವಾಯು ಎಂಬ ಚೀತಾಗಳ ಮೇಲೆ ದಾಳಿ ನಡೆಸಿವೆ. ಈ ಗೌರವ್ ಮತ್ತು ಶೌರ್ಯ ಚೀತಾಗಳು ಇನ್ನೂ ಚಿಕ್ಕವು. ಅತ್ಯಂತ ಆಕ್ರಮಣಕಾರಿ ಎಂದೂ ಕುನೊ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೆರಡು ಚೀತಾ ಸಾವು; ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಇನ್ನು ಮಧ್ಯಪ್ರದೇಶಕ್ಕೆ ಕರೆತರಲಾದ ಚೀತಾಗಳು ಒಂದರ ಬೆನ್ನಿಗೆ ಒಂದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಾಣಿತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಚೀತಾಗಳನ್ನು ಬಿಡಲು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನ ಸೂಕ್ತ ಸ್ಥಳವಲ್ಲ ಎಂಬ ಅಭಿಪ್ರಾಯವನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಸ್ಥಳಾವಕಾಶ ಕಡಿಮೆ ಇದ್ದಲ್ಲಿ ಹೀಗೆ ಪ್ರಾಣಿಗಳ ಕಾಳಗವೂ ಹೆಚ್ಚಿರುತ್ತದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಸುಪ್ರಿಂಕೋರ್ಟ್ ಕೂಡ ಗಣನೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲ, ‘ಹವಾಮಾನ ಮತ್ತು ಸ್ಥಳಾವಕಾಶದ ದೃಷ್ಟಿಯಿಂದ ಚೀತಾಗಳನ್ನು ಮಧ್ಯಪ್ರದೇಶದ ಬದಲು, ರಾಜಸ್ಥಾನದಲ್ಲಿ ಬಿಡುವಂತೆ ಈಗಾಗಲೇ ಕೇಂದ್ರಸರ್ಕಾರಕ್ಕೆ ಹೇಳಿದೆ.