ನವ ದೆಹಲಿ: ಭಾರತದಲ್ಲಿ ಚೀತಾ ಸಂತತಿ ನಶಿಸಿಹೋಗಿ 70 ವರ್ಷಗಳ ನಂತರ ಇಂದು ಮುಂಜಾನೆ ಸುಮಾರು 7.45ರ ಹೊತ್ತಿಗೆ ಎಂಟು ಚೀತಾಗಳು ನಮೀಬಿಯಾದಿಂದ ಭಾರತಕ್ಕೆ ಬಂದಿವೆ (Cheetahs return to India). ಚೀತಾ ಸಂತತಿ ಪುನರುಜ್ಜೀವನಗೊಳಿಸುವ ಯೋಜನೆಯ ಭಾಗವಾಗಿ ಈ ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ ದಿನವೇ ಚೀತಾಗಳು ಭಾರತಕ್ಕೆ ಬರುತ್ತಿರುವುದು ವಿಶೇಷ.
ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದಲ್ಲಿ ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದೆ. ದೊಡ್ಡದಾದ ಗಾಳಿಯಾಡುವ ಪೆಟ್ಟಿಗೆಯಲ್ಲಿ ಚೀತಾಗಳನ್ನು ಇಟ್ಟು, ಅವುಗಳನ್ನು ಸರಕು ವಿಮಾನದಲ್ಲಿ ತುಂಬಿಕೊಂಡು ತರಲಾಗಿದೆ. ಮಾರ್ಗಮಧ್ಯೆ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಲಾಗಿತ್ತು. ಇಂದು ಗ್ವಾಲಿಯರ್ನಲ್ಲಿ ಲ್ಯಾಂಡ್ ಆದ ಚೀತಾಗಳನ್ನು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ವಾಗತಿಸಿದರು. ನಮೀಬಿಯಾದಿಂದ ವಿಮಾನ ಬರುವುದಕ್ಕೂ ಮುಂಚಿತವಾಗಿಯೇ ಏರ್ಪೋರ್ಟ್ನಲ್ಲಿದ್ದ ಸಿಂಧಿಯಾ ಚೀತಾಗಳಿರುವ ಪೆಟ್ಟಿಗೆಯನ್ನು ಕೆಳಕ್ಕೆ ಇಳಿಸುವುದನ್ನೆಲ್ಲ ಖುದ್ದಾಗಿ ಪರಿಶೀಲಿಸಿದರು.
ಚಿರತೆಗಳನ್ನು ಗ್ವಾಲಿಯರ್ ಏರ್ಪೋರ್ಟ್ನಿಂದ ಭಾರತೀಯ ವಾಯುಪಡೆಯ ಚಿನೂಕ್ ಏರ್ಕ್ರಾಫ್ಟ್ ಮೂಲಕ ಶಿಯೋಪುರ್ ಜಿಲ್ಲೆಯಲ್ಲಿರು ಕುನೋ ಪಾಲ್ಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿದೆ. ಬೆಳಗ್ಗೆ 10.45ರ ಹೊತ್ತಿಗೆ ಪ್ರಧಾನಿ ಮೋದಿ ಚೀತಾಗಳನ್ನು ಉದ್ಯಾನವನಕ್ಕೆ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಮಧ್ಯಪ್ರದೇಶ ತಲುಪಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಕುನೋ ಪಾಲ್ಪುರ ನ್ಯಾಷನಲ್ ಪಾರ್ಕ್ಗೆ ತೆರಳಲಿದ್ದಾರೆ.
ಇದನ್ನೂ ಓದಿ: Viral Video | ನಾಳೆ ನಮೀಬಿಯಾದಿಂದ ಭಾರತಕ್ಕೆ ಬರಲಿರುವ ಚೀತಾಗಳ ಫಸ್ಟ್ಲುಕ್ ಇಲ್ಲಿದೆ