Site icon Vistara News

ಕಾಂಗ್ರೆಸ್​​ನವರು ಬುದ್ಧಿಯನ್ನು ಹೂತು ಹಾಕಿ ಮಾತಾಡುತ್ತಾರೆ, ಚೇಲಾಗಳು ಅವರ ಬಾಸ್​​ನಂತೆಯೇ ಇರುತ್ತಾರೆ; ಖುಷ್ಬು ಸುಂದರ್​ ವ್ಯಂಗ್ಯ

Khushbu Sundar

#image_title

ಚೆನ್ನೈ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೆನ್ನೈಗೆ ಭೇಟಿ ಕೊಡಲಿದ್ದಾರೆ. ನರೇಂದ್ರ ಮೋದಿ ಭೇಟಿ ವಿರೋಧಿಸಿ ಕಾಂಗ್ರೆಸ್​​ನವರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಹೀಗೆ ಕಪ್ಪು ಬಾವುಟ ಹಿಡಿದು ಪ್ರತಿಭಟನೆಗೆ ಸಜ್ಜಾದ ಕಾಂಗ್ರೆಸ್ಸಿಗರಿಗೆ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್​ ತಿರುಗೇಟು ನೀಡಿದ್ದಾರೆ. ‘ ‘ಜಗತ್ತೇ ಪ್ರೀತಿಸುವ ನಮ್ಮ ಪ್ರಧಾನಿಯವರ ಬಗ್ಗೆ ಕಾಂಗ್ರೆಸ್​​ನವರು ಹೃದಯ ಮತ್ತು ಮನಸ್ಸಿನಲ್ಲಿ ದ್ವೇಷವನ್ನೇ ತುಂಬಿಕೊಂಡಿದ್ದಾರೆ. ಈಗ ಹೊಸದಾಗಿ ನಿರ್ಮಾಣವಾದ ಏರ್​ಪೋರ್ಟ್​ ಟರ್ಮಿನಲ್​​ ಬಗ್ಗೆಯೂ ಅವರಿಗೆ ಸಂತೋಷವಿಲ್ಲ. ಈ ಮೂಲಕ ತಮಿಳುನಾಡು ಅಭಿವೃದ್ಧಿ ಬೇಡ ಎಂದೇ ಬಯಸುತ್ತಿದ್ದಾರೆ. ಅದೇ ಅರ್ಥದ ಮಾತುಗಳನ್ನು ಆಡುತ್ತಿದ್ದಾರೆ. ಕಾಂಗ್ರೆಸ್​​ನಲ್ಲಿ ಕೆಲವರು ಇದ್ದಾರೆ. ಅವರಿಗೆ ತಾವು ಈ ರಾಜ್ಯವನ್ನು ಅವನತಿಗೆ ಕೊಂಡೊಯ್ಯುತ್ತಿರುವುದು ಗೊತ್ತಾಗುತ್ತಿಲ್ಲ. ಅವರು ಮಾತನಾಡುವಾಗ ತಮ್ಮ ಬುದ್ಧಿಯನ್ನು ಎಲ್ಲೋ ಹೂತುಹಾಕಿರುತ್ತಾರೆ. ಇನ್ನು ಕಾಂಗ್ರೆಸ್ಸಿಗರು ಸಂವೇದನಾಶೀಲರಾಗಿ ಮಾತನಾಡಲಿ ಎಂದು ನಿರೀಕ್ಷಿಸುವುದೂ ಒಂದೇ, ನಾವು ನಮ್ಮ ಸಂವೇದನೆಯನ್ನು ಪರೀಕ್ಷೆಗೆ ಒಡ್ಡುವುದೂ ಒಂದೇ. ಏನು ಮಾಡೋಕೆ ಆಗತ್ತೆ? ಚೇಲಾಗಳು ಅವರ ಬಾಸ್​ನಂತೆಯೇ ಇರುತ್ತಾರೆ’ ಎಂದು ಟ್ವೀಟ್​ಮಾಡಿದ್ದಾರೆ.

ಮೊದಲು ಕಾಂಗ್ರೆಸ್​​ನಲ್ಲಿಯೇ ಇದ್ದ ಖುಷ್ಬು ಸುಂದರ್ 2020ರಲ್ಲಿ ಬಿಜೆಪಿ ಸೇರಿದ್ದಾರೆ. ಹೀಗೆ ಬಿಜೆಪಿ ಸೇರ್ಪಡೆಯಾದ ಬಳಿಕ ಅವರು ಕಾಂಗ್ರೆಸ್ ವಿರುದ್ಧ, ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ಹೆಚ್ಚಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈಗೆ ಭೇಟಿ ನೀಡಿ, ಅಲ್ಲಿನ ಏರ್​ಪೋರ್ಟ್​​ನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಕರ್ಯ ಇರುವ ಟರ್ಮಿನಲ್​ ಸೇರಿ, ಇನ್ನೂ ವಿವಿಧ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಹಾಗೇ, ಡಾ.ಎಂಜಿಆರ್​ ಸೆಂಟ್ರಲ್​ ರೈಲ್ವೆ ಸ್ಟೇಶನ್​​ನಲ್ಲಿ, ಚೆನ್ನೈ-ಕೊಯಂಬತ್ತೂರ್​ ವಂದೇ ಭಾರತ್​ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಚೆನ್ನೈ ಭೇಟಿಯನ್ನು ಖಂಡಿಸಿ, ಕಾಂಗ್ರೆಸ್ಸಿಗರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು 2019ರ ಮೋದಿ ಸರ್​ನೇಮ್​ಗೆ ಅವಹೇಳನ ಮಾಡಿದ ಕೇಸ್​​ನಲ್ಲಿ ದೋಷಿ ಎಂದು ಸಾಬೀತಾದಾಗ ಖುಷ್ಬು ಸುಂದರ್​ ಅವರು 2018ರಲ್ಲಿ, ಅಂದರೆ ಅವರು ಕಾಂಗ್ರೆಸ್​​ನಲ್ಲಿ ಇದ್ದಾಗ ಮಾಡಿದ್ದ ಟ್ವೀಟ್​ವೊಂದು ವೈರಲ್ ಆಗಿತ್ತು. ’ಇಲ್ಲಿ ಮೋದಿ, ಅಲ್ಲಿ ಮೋದಿ, ಎಲ್ಲೆಲ್ಲಿ ನೋಡಿದರೂ ಮೋದಿ..ಆದರೇನು ಮಾಡುವುದು? ಎಲ್ಲ ಮೋದಿಗಳ ಮುಂದೆಯೂ ಭ್ರಷ್ಟಾಚಾರವೆಂಬ ಉಪನಾಮವಿದೆ. ಮೋದಿ ಎಂದರೇ ಭ್ರಷ್ಟಾಚಾರ ಎಂಬ ಅರ್ಥವೇ? ನಾವು ಮೋದಿ ಪದದ ಅರ್ಥವನ್ನು ಭ್ರಷ್ಟಾಚಾರವೆಂದು ಬದಲಿಸೋಣ. ನೀರವ್​, ಲಲಿತ್​, ನಮೋ=ಭ್ರಷ್ಟಾಚಾರ ಎಂದು ಮಾಡೋಣ. ಇದು ಸೂಕ್ತವಾಗಿದೆ’ ಎಂದಿದ್ದರು. ಇದೇ ಟ್ವೀಟ್ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಖುಷ್ಬು ವಿರುದ್ಧ ಕ್ರಮ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: ChatGPT: ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗ್ತಾರಾ?-ಹಾಗಾಗಲು ಏಲಿಯನ್​ಗಳೇ ಭೂಮಿಗೆ ಬರಬೇಕು ಎಂದು ಉತ್ತರಿಸಿದ ಚಾಟ್ ​ಜಿಪಿಟಿ

ರಾಹುಲ್ ಗಾಂಧಿಯವರು 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾತನಾಡುವಾಗ ‘ಎಲ್ಲ ಕಳ್ಳರ ಉಪನಾಮಗಳೂ ಮೋದಿ ಎಂದೇ ಇರುತ್ತದೆ’ ಎಂದು ಹೇಳಿದ್ದರು. ಈ ಮೂಲಕ ಲಲಿತ್ ಮೋದಿ, ನೀರವ್ ಮೋದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನ ಮಾಡಿದ್ದರು. ಮೋದಿ ಉಪನಾಮದ ಬಗ್ಗೆ ಹೀಗೆ ಕೆಟ್ಟದಾಗಿ ಮಾತನಾಡಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮಾ.23ರಂದು ತೀರ್ಪು ನೀಡಿದ ಕೋರ್ಟ್​, ರಾಹುಲ್ ಗಾಂಧಿಯನ್ನು ದೋಷಿ ಎಂದು ಪರಿಗಣಿಸಿ, 2ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

ರಾಹುಲ್ ಗಾಂಧಿಯವರು 2019ರಲ್ಲಿ ಹೇಳಿದ ಮಾತುಗಳಿಗೂ, ಖುಷ್ಬು ಸುಂದರ್​ ಅವರು 2018ರಲ್ಲಿ ಮಾಡಿದ್ದ ಟ್ವೀಟ್​ಗೂ ಏನು ವ್ಯತ್ಯಾಸ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ಸಮರ್ಥನೆ ಕೊಟ್ಟಿಕೊಂಡಿದ್ದ ಖುಷ್ಬು, ‘ಹೌದು..ನಾನು ಆಗ ಟ್ವೀಟ್ ಮಾಡಿದ್ದೆ. ಆದರೆ ಬಹಳ ಹಿಂದೆಯೇ ನನ್ನ ನಿಲುವು ಬದಲಿಸಿಕೊಂಡು, ತಪ್ಪು ಸರಿಪಡಿಸಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ’ ಎಂದಿದ್ದರು.

Exit mobile version