ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತೆಲಂಗಾಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಚೆನ್ನೈಗೆ ತೆರಳಿ, ಅಲ್ಲಿನ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಶನ್ನಲ್ಲಿ, ದೇಶದ 14ನೇ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat) ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಈ ರೈಲು ಚೆನ್ನೈ-ಕೊಯತ್ತೂರ್ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಇಲ್ಲಿಗೆ ಬರುವುದಕ್ಕೂ ಮೊದಲು ಪ್ರಧಾನಿ ಮೋದಿಯವರು ತೆಲಂಗಾಣದಲ್ಲಿ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು.
ರೈಲ್ವೆ ಸ್ಟೇಶನ್ನ 10ನೇ ಪ್ಲಾಟ್ಫಾರ್ಮ್ನಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ ಕೊಡುವಾಗ ‘ಮೋದಿ..ಮೋದಿ’ ಎಂದು ಘೋಷಣೆ ಕೂಗಲಾಗುತ್ತಿತ್ತು. 9ನೇ ಪ್ಲಾಟ್ಫಾರ್ಮ್ನ ಬೇಲಿಯಾಚೆಗೂ ಅಪಾರ ಜನ ತುಂಬಿದ್ದರು. ಹಸಿರು ನಿಶಾನೆ ತೋರಿದ ಬಳಿಕ ಪ್ರಧಾನಿ ಮೋದಿಯವರು ರೈಲಿನ ಲೋಕೋ ಪೈಲೆಟ್ಗಳ ಜತೆ ಮಾತುಕತೆ ನಡೆಸಿದರು. ಈ ವೇಳೆ ಅವರೊಂದಿಗೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇದ್ದರು. ಈ ರೈಲು ಪೆರಂಬೂರ್, ಅರಕ್ಕೋಣಂ, ಗುಡಿಯಾಟ್ಟಂ, ವಾಣಿಯಂಬಾಡಿ, ತಿರುಪತ್ತೂರ್, ಮೊರಪ್ಪುರ್, ಸೇಲಂ, ಈರೋಡ್ ಮತ್ತು ತಿರುಪುರ್ ಸ್ಟೇಶನ್ಗಳಲ್ಲಿ ನಿಲುಗಡೆಯಾಗಲಿದೆ.
ಇದನ್ನೂ ಓದಿ: Vande Bharat Express: ದೇಶದ 13ನೇ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿಯವರಿಂದ ಚಾಲನೆ
ನಾಳೆ (ಏಪ್ರಿಲ್ 9)ಯಿಂದ ಈ ರೈಲು ಸಂಚಾರ ಶುರುವಾಗಲಿದೆ. ಎಂಟು ಕೋಚ್ಗಳನ್ನು ಹೊಂದಿರುವ ಇದು ಮುಂಜಾನೆ 6ಕ್ಕೆ ಕೊಯಂಬತ್ತೂರ್ನ್ನು ಬಿಟ್ಟರೆ, ಬೆಳಗ್ಗೆ 11.50ಕ್ಕೆಲ್ಲ ಚೆನ್ನೈ ತಲುಪಲಿದೆ. ಹಾಗೇ, ಮಧ್ಯಾಹ್ನ 2.25ಕ್ಕೆ ಚೆನ್ನೈನಿಂದ ಹೊರಟು ಸಂಜೆ 8.15ಕ್ಕೆ ಕೊಯಂಬತ್ತೂರ್ ತಲುಪಲಿದೆ. ಈ ರೈಲು ಸಂಚಾರಕ್ಕೆ ಚಾಲನೆ ಕೊಟ್ಟು ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, 5ಜಿ ಪ್ರಾಜೆಕ್ಟ್ನ ಬಗ್ಗೆ ಕೆಲಸ ಮಾಡುತ್ತಿರುವ ಐಐಟಿ ಮದ್ರಾಸ್ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.