ನವ ದೆಹಲಿ: ಈಶಾನ್ಯ ಭಾರತದೆಲ್ಲೆಡೆ ಭರ್ಜರಿ ಮಳೆಯಾಗುತ್ತಿದೆ. ಮೇಘಾಲಯದ ಚಿರಾಪುಂಜಿಯಲ್ಲಿ 24ಗಂಟೆಯಲ್ಲಿ 972 ಮಿಮೀ ಮಳೆ (Cherrapunji Rainfall)ಯಾಗಿದ್ದು, ಇದು ಕಳೆದ 27ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಬಿದ್ದ ಅತ್ಯಂತ ಹೆಚ್ಚು ಪ್ರಮಾಣದ ಮಳೆ. ಚಿರಾಪುಂಜಿಯಲ್ಲಿ ಬುಧವಾರ ಕೂಡ 811.6ಮಿಮೀ ಮಳೆ ದಾಖಲಾಗಿತ್ತು. ದಿನದಿಂದ ದಿನಕ್ಕೆ ಮಳೆ ಹೆಚ್ಚುತ್ತಿದೆ. ಗಾಳಿಯ ಗುಣಮಟ್ಟ ಅಧಿಕವಾಗಿದೆ. ಇಷ್ಟುದಿನ ಬಿಸಿಲು, ಉಷ್ಣಗಾಳಿಯಿಂದ ನಲುಗಿದ್ದ ಈಶಾನ್ಯ ಭಾರತದಲ್ಲಿ ಮಳೆ ತಂಪೆರೆದರೂ ಕೂಡ ಅಪಾರ ಹಾನಿಯನ್ನೂ ಉಂಟು ಮಾಡುತ್ತಿದೆ. ಇಲ್ಲಿಯವರೆಗೆ ಮಳೆ-ಪ್ರವಾಹ-ಭೂಕುಸಿತದಿಂದ ಮೇಘಾಲಯದಲ್ಲಿ 13, ಅಸ್ಸಾಂನಲ್ಲಿ 9 ಸೇರಿ ಒಟ್ಟು 22 ಜನರು ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ 8.30ಕ್ಕೆ ಹವಾಮಾನ ಇಲಾಖೆಯಲ್ಲಿ ದಾಖಲಾದ ಮಾಹಿತಿ ಪ್ರಕಾರ, ಮೇಘಾಲಯದ ಮೌಸಿನ್‌ರಾಮ್‌ನಲ್ಲಿ 24 ತಾಸಿನಲ್ಲಿ 1003.6 ಎಂಎಂ ಮಳೆ ಬಿದ್ದಿದೆ. ಮೌಸಿನ್‌ರಾಮ್‌ನಿಂದ 10 ಕಿಮೀ ದೂರದಲ್ಲಿರುವ ಚಿರಾಪುಂಜಿಯಲ್ಲಿ ಶುಕ್ರವಾರ ಬಿದ್ದಷ್ಟು ಮಳೆ, 1995ರಿಂದ ಈಚೆಗೆ ಯಾವವರ್ಷವೂ ಜೂನ್ ತಿಂಗಳಲ್ಲಿ ಬಿದ್ದಿರಲಿಲ್ಲ. ಅಷ್ಟೇ ಅಲ್ಲ, ಕಳೆದ 122 ವರ್ಷಗಳಲ್ಲಿಯೇ ಮೂರನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿದೆ. ಇನ್ನು ಮೌಸಿನ್‌ರಾಮ್‌ನಲ್ಲಿ ಬುಧವಾರ ಬೆಳಗ್ಗೆ 8.30ರ ಹೊತ್ತಿಗೆ, 24 ಗಂಟೆಯಲ್ಲಿ 710.6 ಮಿಮೀ ಮಳೆ ಸುರಿದಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೌಸಿನ್‌ರಾಮ್‌ನಲ್ಲಿ ವಾರ್ಷಿಕ ಸರಾಸರಿ 11802.4 ಮಿಮೀ ಮಳೆಯಾಗುತ್ತದೆ (1974-2022ರ ಅವಧಿಯ ಲೆಕ್ಕಾಚಾರ). ಹಾಗೇ, ಚಿರಾಪುಂಜಿಯಲ್ಲಿ ವಾರ್ಷಿಕ 11359.4 ಮಿಮೀ ಮಳೆ ಸುರಿಯುತ್ತಿದೆ. (1971-2020ರ ಅವಧಿಯ ಲೆಕ್ಕದಂತೆ). 1901ರಿಂದ ಇಲ್ಲಿಯವರೆಗೆ ಚಿರಾಪುಂಜಿಯಲ್ಲಿ ಜೂನ್ ತಿಂಗಳಲ್ಲಿ ಒಂದು ದಿನದಲ್ಲಿ 800 ಎಂಎಂಗೂ ಅಧಿಕ ಮಳೆಯಾಗಿದ್ದು 9ಬಾರಿ. ಜೂನ್ ತಿಂಗಳು ಶುರುವಾದಾಗಿನಿಂದ ಇಲ್ಲಿಯವರೆಗೆ ಚಿರಾಪುಂಜಿಯಲ್ಲಿ ಒಟ್ಟೂ 4081.3 ಮಳೆ ದಾಖಲಾಗಿದೆ ಎಂದು ಮಾಹಿತಿ ನೀಡಿದೆ.
ಅಸ್ಸಾಂನಲ್ಲಿ ಭರ್ಜರಿ ಮಳೆ
ಅಸ್ಸಾಂನಲ್ಲಿ ಮಳೆಯ ಹೊಡೆತ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶುಕ್ರವಾರ ಒಂದೇದಿನ ಇಬ್ಬರು ಮಕ್ಕಳು ಸೇರಿ ಒಂಭತ್ತು ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಪ್ರವಾಹ ಮತ್ತು ಭೂಕುಸಿತಕ್ಕೆ ಅಸ್ಸಾಂನಲ್ಲಿ ಈ ವರ್ಷ ಮೃತಪಟ್ಟವರ ಸಂಖ್ಯೆ 55ಕ್ಕೇರಿದೆ. ಅಸ್ಸಾಂನ ನಲ್ಬರಿ, ಬಾಲಾಜಿ, ದುಬ್ರಿ, ಕಾಮರೂಪ್, ಕೊಕ್ರಾಝಾರ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಸಾವಿನ ಪ್ರಕರಣಗಳು ವರದಿಯಾಗಿವೆ. ರಾಜ್ಯದ 28 ಜಿಲ್ಲೆಗಳಲ್ಲಿ ಒಟ್ಟು 1,894ಮಂದಿ ಸಂತ್ರಸ್ತರಾಗಿದ್ದು, ಬ್ರಹ್ಮಪುತ್ರ, ಕೊಪಿಲಿ, ಮಾನಸ್, ಬೇಕಿ ಮುಂತಾದ ನದಿಗಳು ಅಪಾಯದ ಮಟ್ಟವನ್ನು ಮೀರಿ ಭೋರ್ಗರೆಯುತ್ತಿವೆ. ರಾಜಧಾನಿ ಗುವಾಹಟಿಯಲ್ಲಿ ಸತತ ನಾಲ್ಕನೇ ದಿನವೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. 234 ರಸ್ತೆಗಳು, 16 ಸೇತುವೆಗಳುಜಖಂಗೊಂಡಿವೆ. ಮೇಘಾಲಯದ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಉಂಟಾದ ಭೂಕುಸಿತದಿಂದಾಗಿ ಗುವಾಹಟಿ-ಶಿಲ್ಲಾಂಗ್, ಸಿಲ್ಚಾರ್-ಅಗರ್ತಲಾ ನಡುವಿನ ಸಂಪರ್ಕ ತೊಡಕಾಗಿದೆ.
ಇದನ್ನೂ ಓದಿ: ಮಳೆಯ ಅಬ್ಬರ, ಕುಸಿಯಿತು ಶ್ರೀರಂಗಪಟ್ಟಣದ ಐತಿಹಾಸಿಕ ಬುರುಜು!
ಅರುಣಾಚಲ ಪ್ರದೇಶದಲ್ಲಿ ಭರ್ಜರಿ ಮಳೆ
ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ, ರಾಷ್ಟ್ರೀಯ ಹೆದ್ದಾರಿ 15ರ ಲಖಿಮ್‌ಪುರ್-ಧೇಮಾಜಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಈ ವರ್ಷ ಎರಡನೇ ಬಾರಿ ಉಂಟಾಗಿರುವ ಪ್ರವಾಹದಿಂದಾಗಿ 2930ಹಳ್ಳಿಗಳ ಜನರು ತೊಂಡರೆಗೀಡಾಗಿದ್ದು, 1,06,677೧, ಮಂದಿ 363 ಆಶ್ರಯ ಕೇಂದ್ರಗಳನ್ನು ಸೇರಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲೂ ಉತ್ತಮ ಮಳೆಯಾಗುತ್ತಿದೆ.
ದೆಹಲಿಗೆ ರಿಲೀಫ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ಏರಿಕೆಯಾಗಿದ್ದ ತಾಪಮಾನ, ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ 3.5ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿದಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಕೆಲವು ಗಂಟೆಗಳಲ್ಲಿ 11.9 ಮಿ.ಮೀ ಮಳೆ ಸುರಿದಿದ್ದು, ಗಾಳಿಯ ಗುಣಮಟ್ಟದಲ್ಲೂ ಗಣನೀಯ ವರ್ಧನೆ ಕಂಡುಬಂದಿದೆ. ಪೂರ್ವ ರಾಜಸ್ಥಾನದಲ್ಲಿ ಕೆಲವು ಕಡೆ ಚದುರಿದ ಮಳೆಯಾಗಿದೆ. ಮುಂದಿನ ಕೆಲವು ದಿನಗಳವರೆಗೆ ಜೈಪುರ, ಉದಯಪುರ, ಬಿಕಾನೇರ್, ಭರತ್‌ಪುರ್, ಕೋಟ ಪ್ರದೇಶಗಳಲ್ಲಿ ಮಳೆ ಮುಂದುವರಿಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಗುಡುಗು ಸಹಿತ ಮಳೆಯ ವಾತಾವರಣ ಕಂಡುಬಂದಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸಾಧ್ಯತೆ
ಮಹಾರಾಷ್ಟ್ರ, ಕೊಂಕಣ ಪ್ರದೇಶಗಳಲ್ಲಿ ಜೂ.18ರಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಜರಾತ್, ಮಧ್ಯಪ್ರದೇಶದ ದಕ್ಷಿಣ ಪ್ರಾಂತ್ಯ, ವಿದರ್ಭ, ತೆಲಂಗಾಣ, ಛತ್ತೀಸ್‌ಗಢದ ಕೆಲವು ಭಾಗಗಳು, ಜಾರ್ಖಂಡ, ದಕ್ಷಿಣ ಒಡಿಸ್ಸಾ, ಆಂಧ್ರದ ಕರಾವಳಿ ಭಾಗಗಳಲ್ಲಿ ಮುಂಗಾರು ಮಾರುತ ಚುರುಕುಗೊಳ್ಳಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಲಾಭ ಗಳಿಕೆಯಷ್ಟೇ ಅಲ್ಲ, ಹವಾಮಾನ ವೈಪರೀತ್ಯದ ನಷ್ಟ ತಗ್ಗಿಸುವ ಕೆಲಸವೂ ಆಗಬೇಕು: ಉದ್ಯಮಿಗಳಿಗೆ ರಿಕಿ ಕೇಜ್ ಕಿವಿಮಾತು