ಛತ್ತೀಸ್ಗಢ್: ಹಿಂದು-ಹಿಂದುತ್ವ ಎಂಬುದು ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿದೆ. ಸದಾ ಒಬ್ಬಲ್ಲ ಒಬ್ಬ ಕಾಂಗ್ರೆಸ್ ನಾಯಕ ಹಿಂದು-ಹಿಂದುತ್ವದ ಅವಹೇಳನ ಮಾಡಿ ವಿವಾದ ಸೃಷ್ಟಿಸುತ್ತಾರೆ. ಅದರಲ್ಲೀಗ ಕರ್ನಾಟಕ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಹಿಂದು ಶಬ್ದದ ಅರ್ಥ ಅಶ್ಲೀಲ ಎಂದು ಹೇಳಿದ್ದಾರೆ. ಸತೀಶ್ ಮಾತಿಗೆ ಪ್ರತಿಪಕ್ಷಗಳಷ್ಟೇ ಅಲ್ಲದೆ, ಸ್ವಪಕ್ಷೀಯರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಅವರು ತಮ್ಮ ಹೇಳಿಕೆ ವಾಪಸ್ ಪಡೆದು, ತಪ್ಪು ಮುಚ್ಚಿಕೊಂಡಿದ್ದಾರೆ. ಇನ್ನೇನೂ ಈ ವಿವಾದ ತಣ್ಣಗಾಯಿತು ಎನ್ನುವಷ್ಟರಲ್ಲೇ ಛತ್ತೀಸ್ಗಢ್ ಕಾಂಗ್ರೆಸ್ ನಾಯಕಿ ಹೇಮಾ ದೇಶಮುಖ್ ಮತ್ತದೇ ಹಿಂದು ವಿರೋಧಿ ನಡೆ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಛತ್ತೀಸ್ಗಢ್ದಲ್ಲಿ ನಡೆದ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ, ಹೇಮಾ ದೇಶಮುಖ್, ರಾಜನಂದಗಾಂವ್ನ ಮೇಯರ್ ಹೇಮಾ ದೇಶಮುಖ್ ಪಾಲ್ಗೊಂಡಿದ್ದರು. ಈ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ‘ನಾನೆಂದಿಗೂ ಗೌರಿ, ಗಣಪತಿ ಸೇರಿ ಯಾವುದೇ ಹಿಂದೂ ದೇವರು-ದೇವತೆಗಳನ್ನು ಪೂಜಿಸುವುದಿಲ್ಲ. ಅವರೆಲ್ಲ ದೇವರ ಅವತಾರ ಎಂದು ನಾನು ನಂಬುವುದೂ ಇಲ್ಲ’ ಎಂಬ ಪ್ರತಿಜ್ಞಾವಿಧಿಯನ್ನು ಅಲ್ಲಿದ್ದ ಎಲ್ಲರೂ ಸ್ವೀಕರಿಸಿದ್ದು, ವಿಡಿಯೊ ವೈರಲ್ ಆಗಿದೆ.
ಇದೂ ಕೂಡ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಸಮಾರಂಭವಾಗಿತ್ತು. ಅಲ್ಲಿ ಅನೇಕ ಹಿಂದು ಧರ್ಮೀಯರು ಬುದ್ಧ ಧರ್ಮ ಸ್ವೀಕರಿಸಿದರು. ಅದರಲ್ಲಿ ಹೇಮಾ ಭಾಗವಹಿಸಿದ್ದರು. ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೇಮಾ ದೇಶಮುಖ್ ‘ಇಂಥ ಸಮಾರಂಭ ಪ್ರತಿವರ್ಷವೂ ನಡೆಯುತ್ತದೆ. ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು, ಹಾಗಾಗಿ ಪಾಲ್ಗೊಂಡಿದ್ದೆ. ಅಲ್ಲಿ ಹಿಂದು ವಿರೋಧಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಅವರು ಹಿಂದು ವಿರೋಧಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿದ್ದಂತೆ ನಾನು ನನ್ನ ಕೈ ಕೆಳಗೆ ಇಳಿಸಿದೆ. ನಾನೊಬ್ಬಳು ಹಿಂದು, ಇಂಥ ಮಾತುಗಳನ್ನು ಆಡುವುದಿಲ್ಲ ಎಂದು ಹೇಳಿದೆ’ ಎಂಬುದಾಗಿ ಹೇಮಾ ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ಕೂಡ ಹೀಗೆ ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ ಆಗುವ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಆಪ್ ನಾಯಕರಾದ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ಪಾಲ್ಗೊಂಡು, ಹಿಂದು ವಿರೋಧಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ್ದರು. ಈಗ ಅದೇ ವಿಷಯವನ್ನು ಉಲ್ಲೇಖಿಸಿ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಹಿಂದುತ್ವದ ವಿರುದ್ಧ ದ್ವೇಷ ಬಿತ್ತುವುದೇ ಕಾಂಗ್ರೆಸ್ನ ಮಹದುದ್ದೇಶ ಎಂದು ಹೇಳಿದ್ದಾರೆ.