ಮಣಿಪುರದ ಚುರಚಾಂದ್ಪುರ ಜಿಲ್ಲೆಯಲ್ಲಿ ಮುಖ್ಯಮಂತ್ರಿ (Manipur Chief Minister) ಎನ್.ಬಿರೆನ್ ಸಿಂಗ್ ಅವರ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಕಾರಣ, ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಚುರಚಾಂದ್ಪುರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಹಾಗೇ, ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಮಣಿಪುರ ರಾಜ್ಯಾದ್ಯಾಂತ ಕಳೆದ ಎರಡು ಮೂರು ತಿಂಗಳಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತೀಕ್ಷ್ಣವಾಗಿ ನಡೆಸಲಾಗುತ್ತಿದೆ. ಸರ್ಕಾರಿ ಭೂಮಿಯನ್ನು, ಮೀಸಲು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರು ಕಟ್ಟಿಕೊಂಡ ಮನೆ, ಇನ್ನಿತರ ಕಟ್ಟಡಗಳು, ನಿರ್ಮಿಸಲಾದ ತೋಟಗಳನ್ನೆಲ್ಲ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತಿದೆ. ಸರ್ಕಾರದ ಈ ಕ್ರಮವನ್ನು ವಿರೋಧಿಸಿ ರಾಜ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಈಗ ರಾಜ್ಯ ಸರ್ಕಾರವು ಧಾರ್ಮಿಕ ಸ್ಥಳವಾದ ಚರ್ಚ್ನ್ನೂ ಕೂಡ ಕೆಡವಿದೆ ಎಂದು ಆರೋಪಿಸಿ ಸ್ಥಳೀಯಬುಡಕಟ್ಟು ನಾಯಕರ ವೇದಿಕೆ ನೇತೃತ್ವದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ತೀವ್ರ ಸ್ವರೂಪ ತಳೆದಿದೆ.
ಚುರಚಾಂದ್ಪುರ ಜಿಲ್ಲೆಯ ನ್ಯೂ ಲಮ್ಕಾ ಏರಿಯಾದಲ್ಲಿ ಇಂದು ಕಾರ್ಯಕ್ರಮ ಇತ್ತು. ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರು ಪಾಲ್ಗೊಳ್ಳಲಿದ್ದರು. ಆದರೆ ಮುನ್ನಾದಿನ ರಾತ್ರಿ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಅಲ್ಲಿ ಹಾಕಿದ್ದ ಪೆಂಡಾಲ್, ಇಟ್ಟಿದ್ದ ಸುಮಾರು 100 ಕುರ್ಚಿಗಳು ಬೆಂಕಿಗೆ ಆಹುತಿ ಆಗಿವೆ. ಅಷ್ಟೇ ಅಲ್ಲ, ನ್ಯೂ ಲಮ್ಕಾದ ಪಿಟಿ ಸ್ಪೋರ್ಟ್ಸ್ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಜಿಮ್ ಕೇಂದ್ರಕ್ಕೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಆ ಜಿಮ್ ಕೇಂದ್ರ ಭಾಗಶಃ ಸುಟ್ಟು ಬೂದಿಯಾಗಿದೆ. ಇಂದು ಮುಖ್ಯಮಂತ್ರಿ ಈ ಜಿಮ್ನ್ನು ಕೂಡ ಉದ್ಘಾಟನೆ ಮಾಡಲಿದ್ದರು. ಅದಾದ ಮೇಲೆ ಸದ್ಭಾವನಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರದಲ್ಲೂ ಅವರು ಪಾಲ್ಗೊಳ್ಳಬೇಕಿತ್ತು. ಸದ್ಯ ಸಿಎಂ ಕಾರ್ಯಕ್ರಮ ರದ್ದಾಗಿದೆ.
ಇದನ್ನೂ ಓದಿ: Ballari News: ಮುಷ್ಟಗಟ್ಟೆಯಲ್ಲಿ ಆಕಸ್ಮಿಕ ಬೆಂಕಿಗೆ ಮೆಕ್ಕೆಜೋಳದ ಬೆಳೆ ಭಸ್ಮ
ಸರ್ಕಾರ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತ ಬಂದಿರುವ ಬುಡಕಟ್ಟು ನಾಯಕರ ವೇದಿಕೆ, ಚುರಚಾಂದ್ಪುರಕ್ಕೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಬಳಿಕ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಏಪ್ರಿಲ್ 27ರಂದು ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆವರೆಗೆ ಜಿಲ್ಲೆಯಾದ್ಯಂತ್ ಬಂದ್ಗೆ ಕರೆ ನೀಡಿತ್ತು. ‘ರಾಜ್ಯಸರ್ಕಾರವು ಮೀಸಲು ಅರಣ್ಯ ಪ್ರದೇಶವನ್ನು ಸರಿಯಾಗಿ ಗುರುತಿಸದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಇದರಿಂದ ಸಂತ್ರಸ್ತರಾಗುವ ರೈತರು ಮತ್ತು ಬುಡಕಟ್ಟು ಜನಾಂಗದವರಿಗೆ ಏನೂ ಪರಿಹಾರ ನೀಡುವ ಯೋಚನೆ ಮಾಡುತ್ತಿಲ್ಲ’ ಎಂದು ಬುಡಕಟ್ಟು ನಾಯಕರ ವೇದಿಕೆ ಆರೋಪಿಸಿದೆ. ಮಾರ್ಚ್ ತಿಂಗಳಲ್ಲಿ ಕೂಡ ಇವರು ಪ್ರತಿಭಟನೆ ನಡೆಸಿದ್ದರು.