ದಿಸ್ಪುರ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಅವರ ನೇತೃತ್ವದ ರಾಜ್ಯ ಸರ್ಕಾರವು 2023-24ನೇ ಸಾಲಿನ ಬಜೆಟ್ ಮಂಡಿಸಿದೆ. ಅದರಲ್ಲಿ ಬಾಲ್ಯ ವಿವಾಹ (Child Marriage) ತಡೆಯುವ ನಿಟ್ಟಿನಲ್ಲಿ 200 ಕೋಟಿ ರೂ.ಯನ್ನು ಸರ್ಕಾರ ಮೀಸಲಿಟ್ಟಿದೆ. ಅಸ್ಸಾಂನಲ್ಲಿ ಬಾಲ್ಯ ವಿವಾಹದ ವಿರುದ್ಧ ಹಿಮಂತ್ ಅವರು ಸಮರ ಸಾರಿದ್ದಾರೆ.
ಇದನ್ನೂ ಓದಿ: Viral Post: ಹೆಂಡತಿಯೇ ತಂಗಿ! ಮದುವೆಯಾಗಿ ಆರು ವರ್ಷಗಳ ಬಳಿಕ ಸತ್ಯ ಬಯಲಾದದ್ದು ಹೇಗೆ?
ಹಣಕಾಸು ಸಚಿವರಾಗಿರುವ ಅಜಂತಾ ನಿಯೋಗ್ ಅವರು ಬಜೆಟ್ ಮಂಡಿಸಿದ್ದಾರೆ. 2026ರೊಳಗೆ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನೀಡಲಾಗಿರುವ ಎಲ್ಲ ಯೋಜನೆಗಳ ನಡುವೆ ಸಂಪರ್ಕ ಸಾಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ನಿರ್ದಿಷ್ಟವಾಗಿ ಕಣ್ಗಾವಲು ಇರಿಸುವುದು, ಸಂಸ್ಥೆಗಳನ್ನು ಬಲಪಡಿಸುವುದು, ಸಹಾಯವಾಣಿ ಆರಂಭಿಸುವುದು, ಸಂತ್ರಸ್ತರ ಪುನರ್ವಸತಿ ಕೇಂದ್ರ ರಚನೆ ಹೀಗೆ ಹಲವಾರು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ದೂರುಗಳ ಮೇಲೆ ನಿಗಾ ಇಡಲು ಕಾಲ್ ಸೆಂಟರ್ ಇರಲಿದೆ. ನಮ್ಮ ಹೆಣ್ಣುಮಕ್ಕಳಿಗೆ ಆಗಿರುವ ಈ ಅನ್ಯಾಯದ ವಿರುದ್ಧ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ನಾನು ಎಲ್ಲರಿಗೂ ಕರೆ ನೀಡುತ್ತೇನೆ” ಎಂದು ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಅಸ್ಸಾಂನಲ್ಲಿ ಸಂಚಲನ ಮೂಡಿಸಿದ ಬಾಲ್ಯ ವಿವಾಹ ತಡೆ ಕಾನೂನು, ಇದು ಮುಸ್ಲಿಮರ ವಿರುದ್ಧದ ಗುರಾಣಿಯೇ?
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, “ಪ್ರತಿ ಆರು ತಿಂಗಳಿಗೊಮ್ಮೆ ರಾಜ್ಯದಲ್ಲಿ ಬಾಲ್ಯವಿವಾಹ ಮಾಡುವವರ ವಿರುದ್ಧ ಬೃಹತ್ ಬಂಧನ ಕಾರ್ಯಾಚರಣೆ ನಡೆಸಲಾಗುವುದು” ಎಂದು ಹೇಳಿದ್ದಾರೆ.