Site icon Vistara News

ಟ್ವಿಟರ್​​ನಲ್ಲಿ 20 ರೂ.ಗೆ ಮಾರಾಟಕ್ಕಿವೆ ಮಕ್ಕಳ ಅಶ್ಲೀಲ ವಿಡಿಯೊಗಳು; ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಆರೋಪ

Swati Maliwal

ನವ ದೆಹಲಿ: ಮಕ್ಕಳ ಅಶ್ಲೀಲ ವಿಡಿಯೋಗಳು ಟ್ವಿಟರ್​​ನಲ್ಲಿ 20 ರೂಪಾಯಿಗೆ ಮಾರಾಟವಾಗುತ್ತಿವೆ ಎಂಬ ಗಂಭೀರ ಆರೋಪವನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಳಿವಾಲ್ ಮಾಡಿದ್ದಾರೆ. ಹಾಗೇ, ಈ ಸಂಬಂಧ ದೆಹಲಿ ಪೊಲೀಸ್​ ಮತ್ತು ಟ್ವಿಟರ್​ಗೆ ನೋಟಿಸ್​ ಕೂಡ ಕೊಟ್ಟಿದ್ದಾರೆ. ‘ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ಅದನ್ನು ದುಡ್ಡಿಗೆ ಮಾರಾಟ ಮಾಡುತ್ತಿದ್ದರೂ, ಅಂಥ ವಿಡಿಯೋಗಳನ್ನು ಡಿಲೀಟ್ ಮಾಡುವಲ್ಲಿ ಟ್ವಿಟರ್​ ವಿಫಲವಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ​ಹಾಗೇ, ತಮ್ಮ ನೋಟಿಸ್​ಗೆ ಉತ್ತರ ನೀಡಲು ದೆಹಲಿ ಪೊಲೀಸ್​ ಮತ್ತು ಟ್ವಿಟರ್​​ಗೆ ಸೆಪ್ಟೆಂಬರ್​ 26ರವರೆಗೆ ಗಡುವು ನೀಡಿದ್ದಾರೆ.

ಈ ಬಗ್ಗೆ ಸ್ವಾತಿ ಮಾಳಿವಾಲ್​ ಟ್ವೀಟ್​ ಮಾಡಿದ್ದು ‘ಯುವತಿಯರ, ಬಾಲಕಿಯರ ಮೇಲೆ ಅತ್ಯಾಚಾರವಾಗುತ್ತಿರುವ ವಿಡಿಯೋಗಳನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಲಾಗುತ್ತಿದೆ. ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋಗಳನ್ನು ಗುಪ್ತ ಕ್ಯಾಮರಾಗಳ ಮೂಲಕ ರೆಕಾರ್ಡ್​ ಮಾಡಿ, ವೈರಲ್​ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಚಂಡೀಗಢ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ನನ್ನನ್ನು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಹುಡುಗಿಯರ ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ನಾನು ನನ್ನ ತಂಡಕ್ಕೆ ಸೂಚಿಸಿದ್ದೆ. ನಮ್ಮ ತಂಡ ಅದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಅತ್ಯಾಚಾರಕ್ಕೀಡಾಗುತ್ತಿರುವ ಫೋಟೋ, ವಿಡಿಯೋಗಳು, ಅಪ್ರಾಪ್ತ ಹುಡುಗಿಯರು, ಮಹಿಳೆಯರೆಲ್ಲ ಸ್ನಾನ ಮಾಡುತ್ತಿರುವ ವಿಡಿಯೊ, ಫೋಟೋಗಳೂ ಪತ್ತೆಯಾಗಿವೆ. ಇಂಥ ಕೆಲವು ಅಶ್ಲೀಲ ವಿಡಿಯೋಗಳನ್ನು 20 ರೂ.-30 ರೂಪಾಯಿಗೆಲ್ಲ ಮಾರಾಟ ಮಾಡುತ್ತಿರುವ ಸಂಗತಿಯೂ ಬೆಳಕಿಗೆ ಬಂದಿದೆ’ ಎಂದು ತಿಳಿಸಿದ್ದಾರೆ.

ಟ್ವಿಟರ್​​ನಲ್ಲಿ ಇಷ್ಟೆಲ್ಲ ಅಶ್ಲೀಲ ವಿಡಿಯೋಗಳು ಹೇಗೆ ಉಳಿದುಕೊಂಡಿವೆ? ಇವನ್ನೆಲ್ಲ ಅಪ್ಲೋಡ್​ ಮಾಡಲಾದರೂ ಹೇಗೆ ಸಾಧ್ಯವಾಯಿತು? ಟ್ವಿಟರ್​ನ ನೀತಿ-ನಿಯಮಗಳು ಇವುಗಳನ್ನು ಪೋಸ್ಟ್​ ಮಾಡದಂತೆ ತಡೆದಿಲ್ಲವಾ ಎಂದು ಸ್ವಾತಿ ಪ್ರಶ್ನಿಸಿದ್ದಾರೆ. ಹಾಗೇ, ಹೀಗೆಲ್ಲ ಅಶ್ಲೀಲ ವಿಡಿಯೊ-ಫೋಟೋಗಳನ್ನು ಹಾಕುವವರ ವಿರುದ್ಧ ಎಫ್​ಐಆರ್​ ದಾಖಲು ಮಾಡುವಂತೆ ದೆಹಲಿ ಪೊಲೀಸರಿಗೆ ಆಗ್ರಹಿಸಿದ್ದಾರೆ.

ಪಂಜಾಬ್​ನ ಚಂಡೀಗಢ ಯೂನಿವರ್ಸಿಟಿಯಲ್ಲಿ ಹುಡುಗಿಯೊಬ್ಬಳು 60 ವಿದ್ಯಾರ್ಥಿನಿಯರ ಸ್ನಾನದ ವಿಡಿಯೊವನ್ನು ಚಿತ್ರೀಕರಿಸಿ ಎಂಎಂಎಸ್​ ಮೂಲಕ ವೈರಲ್​ ಮಾಡಿದ್ದಾಳೆ ಎಂಬ ಸುದ್ದಿ ಒಮ್ಮೆಲೇ ಹರಡಿತ್ತು. ಆದರೆ ಪೊಲೀಸ್ ತನಿಖೆ ಬಳಿಕ, ಅದು ಸುಳ್ಳು..ಆಕೆಯ ಖಾಸಗಿ ವಿಡಿಯೋ ಮಾತ್ರ ವೈರಲ್ ಆಗಿದ್ದು ಎಂಬುದು ದೃಢಪಟ್ಟಿತ್ತು. ಈ ಕೇಸ್​​ನ್ನು ಪಂಜಾಬ್​ ಸಿಎಂ ಭಗವಂತ್ ಮಾನ್​ ಉನ್ನತ ತನಿಖೆಗೂ ಆದೇಶಿಸಿದ್ದಾರೆ. ಅದರ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ, ಸ್ವಯಂ ಪ್ರೇರಿತರಾಗಿ ಟ್ವಿಟರ್​ನಲ್ಲಿರುವ ಅಶ್ಲೀಲ ವಿಡಿಯೊ, ಫೋಟೋಗಳ ಪತ್ತೆ ಕಾರ್ಯ ತನಿಖೆ ಕಾರ್ಯ ಕೈಗೊಂಡಿದ್ದರು.

ಇದನ್ನೂ ಓದಿ: Punjab MMS Scandal | ಹುಡುಗಿಯ ಸ್ನಾನದ ವಿಡಿಯೊ ಲೀಕ್​ ಕೇಸ್​; ಉನ್ನತ ತನಿಖೆಗೆ ಸರ್ಕಾರದ ಆದೇಶ

Exit mobile version