ನವ ದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅಧಿಕಾರ ಅವಧಿ ಇಂದು ಮುಕ್ತಾಯವಾಗಲಿದ್ದು, ಆಗಸ್ಟ್ 27ರಂದು ನ್ಯಾ. ಯು.ಯು.ಲಲಿತ್ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI)ಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. 2021ರಲ್ಲಿ ಎಸ್.ಎ. ಬಾಬ್ಡೆ ನಿವೃತ್ತಿ ಬಳಿಕ ಅದೇ ವರ್ಷ ಏಪ್ರಿಲ್ 24ರಂದು ಎನ್.ವಿ.ರಮಣ ಸಿಜೆಐ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು.
ಒಂದು ವರ್ಷದ ನಾಲ್ಕು ತಿಂಗಳ ಕಾಲ ಸಿಜೆಐ ಹುದ್ದೆಯಲ್ಲಿ ಇದ್ದ ಎನ್.ವಿ.ರಮಣ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಕೆಲವು ಕೇಸ್ಗಳಿಗೆ ತೀರ್ಪು ನೀಡಿದ್ದರೆ, ಇನ್ನೂ ಒಂದಷ್ಟು ತೀರ್ಪು ನೀಡುವುದು ಬಾಕಿ ಉಳಿದಿದೆ. ಇಂದು ಎನ್.ವಿ.ರಮಣ 5 ಮಹತ್ವದ ಕೇಸ್ಗಳ ತೀರ್ಪು ನೀಡಲಿದ್ದಾರೆ. ಚುನಾವಣೆಯಲ್ಲಿ ಉಚಿತ ಕೊಡುಗೆಗಳ ಭರವಸೆ ನಿಷೇಧ, 2007ರ ಗೋರಖ್ಪುರ ಗಲಭೆ, ಕರ್ನಾಟಕ ಅಕ್ರಮ ಗಣಿಗಾರಿಕೆ, ರಾಜಸ್ಥಾನ ಗಣಿ ಗುತ್ತಿಗೆ ಪ್ರಕರಣಗಳು ಇದರಲ್ಲಿ ಸೇರಿವೆ. ಅದರಲ್ಲಿ ಎರಡು ಕೇಸ್ನ ತೀರ್ಪು ಈಗಾಗಲೇ ಹೊರಬಿದ್ದಿದೆ. ಅಂದ ಹಾಗೇ, ಇಂದು ಮುಂಜಾನೆಯಿಂದ ಸುಪ್ರೀಂಕೋರ್ಟ್‌ನಲ್ಲಿ ಎನ್.ವಿ.ರಮಣ, ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಸಿ.ಟಿ.ರವಿಕುಮಾರ್ ನೇತೃತ್ವದ ಪೀಠ ವಿವಿಧ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನ ಇಂದಿನ ಕಲಾಪಗಳನ್ನು ನೇರಪ್ರಸಾರದ ಮೂಲಕ ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ.
27ರಂದು ಅಧಿಕಾರ ಸ್ವೀಕಾರ ಮಾಡಲಿರುವ ಯು.ಯು. ಲಲಿತ್
ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಆಗಸ್ಟ್ 27ರಂದು ಅಧಿಕಾರ ಸ್ವೀಕಾರ ಮಾಡಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೊಧಿಸುವರು. ಇವರು ದೇಶದ 49ನೇ ಸಿಜೆಐ ಆಗಲಿದ್ದಾರೆ. ಹಾಗೇ, 74 ದಿನಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಸಿಜೆಐ ಎನ್.ವಿ.ರಮಣರನ್ನು ಬಿಟ್ಟರೆ ಎರಡನೇ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ . ೧೯೫೭ರ ನವಂಬರ್ ೯ರಂದು ಜನಿಸಿದ ಇವರ ತಂದೆ ಯು.ಆರ್. ಲಲಿತ್ ಅವರು ಮುಂಬಯಿ ಹೈಕೋರ್ಟ್‌ನಲ್ಲಿ ಅಡಿಷನಲ್ ಜಡ್ಜ್ ಆಗಿದ್ದರು. ಇವರ ತಾಯಿ ಕೂಡಾ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದರು. ಉದಯ್ ಲಲಿತ್ ಅ ವರು ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭ ಮಾಡಿದ್ದು 1983ರಲ್ಲಿ. 1985ರವರೆಗೂ ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಅದಾಗಿ ಒಂದು ವರ್ಷದಲ್ಲಿ 1986ರಿಂದ ದೆಹಲಿ ಕೋರ್ಟ್ನಲ್ಲಿ ಪ್ರ್ಯಾಕ್ಟೀಸ್ ಪ್ರಾರಂಭಿಸಿದರು. 2004ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು.
ಇದನ್ನೂ ಓದಿ: ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಉದಯ್ ಯು ಲಲಿತ್; ಸಿಜೆಐ ರಮಣ ಶಿಫಾರಸು