ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ವರ್ಷವಷ್ಟೇ ಅಸ್ತಿತ್ವಕ್ಕೆ ಬಂದಿರುವ ಇಂಡಿಯನ್ ಸೆಕ್ಯೂಲರ್ ಫ್ರಂಟ್ (ISF) ಪಕ್ಷದ ಕಾರ್ಯಕರ್ತರು ಮತ್ತು ಅಲ್ಲಿನ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ನಡುವೆ ಮಾರಾಮಾರಿ ಉಂಟಾದ ಬೆನ್ನಲ್ಲೇ, ಐಎಸ್ಎಫ್ ಸದಸ್ಯರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಸಂಘರ್ಷದಲ್ಲಿ ಸುಮಾರು 19 ಪೊಲೀಸರು ಗಾಯಗೊಂಡಿದ್ದು, ಐಎಸ್ಎಫ್ನ 17ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಜನವರಿ 21ರಂದು ಪೂರ್ವ ಕೋಲ್ಕತ್ತದ ಭಂಗೋರೆ ಎಂಬಲ್ಲಿ ಇಂಡಿಯನ್ ಸೆಕ್ಯೂಲರ್ ಫ್ರಂಟ್ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜ ಹಾರಿಸಲು ಮುಂದಾದರು. 2021ರ ಜನವರಿ 21ರಂದು ಈ ಪಕ್ಷ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ, ಅದರ ಒಂದನೇ ವರ್ಷದ ಸಂಸ್ಥಾಪನಾ ದಿನ ಆಚರಣೆಗಾಗಿ ಅವರು ಧ್ವಜ ಹಾರಿಸಲು ಹೊರಟಿದ್ದರು. ಆಗ ಅದನ್ನು ಟಿಎಂಸಿ ಕಾರ್ಯಕರ್ತರು/ನಾಯಕರು ವಿರೋಧಿಸಿದರು. ಇದೇ ವಿಷಯ ದೊಡ್ಡದಾಗಿ ಮಾತಿನ ಚಕಮಕಿಯಿಂದ ಮಾರಾಮಾರಿಯವರೆಗೆ ತಲುಪಿತ್ತು. ಭಂಗೋರೆಯ ವಿವಿಧ ಭಾಗಗಳಲ್ಲಿ ಎರಡೂ ಪಕ್ಷಗಳವರು ಪರಸ್ಪರ ರಾಡ್, ಬಡಿಗೆ, ಕಲ್ಲು, ಇಟ್ಟಿಗೆಯಲ್ಲಿ ಬಡಿದಾಡಿಕೊಂಡರು. ಅಷ್ಟೇ ಅಲ್ಲ ಕಚ್ಚಾ ಬಾಂಬ್ ದಾಳಿಯನ್ನೂ ನಡೆಸಿದ್ದಾರೆ. ಹತಿಶಾಲಾದಲ್ಲಿರುವ ಟಿಎಂಸಿಯ ಮೂರು ಕಚೇರಿಗಳು, ಅವರ ಹಲವು ವಾಹನಗಳಿಗೆ ಐಎಸ್ಎಫ್ ಕಾರ್ಯಕರ್ತರು ಬೆಂಕಿ ಕೂಡ ಹಚ್ಚಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಶ್ರುವಾಯು ಪ್ರಯೋಗ ಕೂಡ ನಡೆಸಿದ್ದರು.
ಇದನ್ನೂ ಓದಿ:ಕೋಲ್ಕತ್ತದಲ್ಲಿ ಗುಂಡಿನ ದಾಳಿ ನಡೆಸಿ, ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್‌ಸ್ಟೆಬಲ್
ಇಷ್ಟೆಲ್ಲದರ ಮಧ್ಯೆ ಮರುದಿನ ಐಎಸ್ಎಫ್ನ ನೂರಾರು ಕಾರ್ಯಕರ್ತರು ಕೋಲ್ಕತ್ತಕ್ಕೆ ತೆರಳಿ, ಅಲ್ಲಿ ಟಿಎಂಸಿ ಪಕ್ಷದ ವಿರುದ್ಧ ದೊಡ್ಡಮಟ್ಟದ ಪ್ರತಿಭಟನಾ ಮೆರವಣಿಗೆ ನಡೆಸಲು ಶುರು ಮಾಡಿದರು. ‘ನಾವು ನಮ್ಮ ಪಕ್ಷದ ಧ್ವಜ ಹಾರಿಸಲು ಮುಂದಾದಾಗ ಟಿಎಂಸಿಯವರು ಹಲ್ಲೆ ನಡೆಸಿದ್ದಾರೆ. ನಮ್ಮ ಮೇಲೆ ಅಟ್ಯಾಕ್ ಮಾಡಿಸಿದ್ದೇ ಟಿಎಂಸಿ ನಾಯಕ ಅಬ್ದುಲ್ ಇಸ್ಲಾಮ್. ಆತನನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ಶುರುವಿಟ್ಟುಕೊಂಡರು.
ಹೀಗೆ ಪ್ರತಿಭಟನೆ ಪ್ರಾರಂಭಿಸಿದ ISF ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಮುಂದಾದಾಗ ಅವರ ಮೇಲ ಕೂಡ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಪೊಲೀಸರು ಆ ಪಕ್ಷದ ಏಕೈಕ ಶಾಸಕ ನೌಶಾದ್ ಸಿದ್ದಿಕಿ ಸೇರಿ, 17 ಮಂದಿಯನ್ನು ಬಂಧಿಸಿದ್ದಾರೆ.