ಪುಣೆ: ರಾಮನವಮಿ ಹಬ್ಬದ (Ram Navami Festival) ಮುನ್ನಾದಿನವಾದ ಬುಧವಾರ (ಮಾ.29) ರಾತ್ರಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕಿರಾದ್ಪುರ ಏರಿಯಾದಲ್ಲಿರುವ ಶ್ರೀರಾಮನ ದೇವಸ್ಥಾನದ ಆವರಣದಲ್ಲಿ ದೊಡ್ಡಮಟ್ಟದ ಗಲಭೆ-ಹಿಂಸಾಚಾರ (Clash Outside Ram Temple In Maharashtra) ನಡೆದಿದೆ. ಪ್ರಾರಂಭದಲ್ಲಿ ಎರಡು ಕೋಮುಗಳ ಗುಂಪುಗಳ ಮಧ್ಯೆ ಗಲಾಟೆ ಶುರುವಾಯಿತು. ಹೊಡೆದಾಟ ನಡೆಯಿತು. ಬರುಬರುತ್ತ ಹೆಚ್ಚೆಚ್ಚು ಜನರು ಸೇರಿ, ಪರಸ್ಪರ ಕಲ್ಲು ತೂರಾಟ ನಡೆಸಿದರು. ಘರ್ಷಣೆ ವಿಕೋಪಕ್ಕೆ ಹೋಗಿ, ಹಲವು ಖಾಸಗಿ ಮತ್ತು ವಾಹನಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾಗಿ ವರದಿಯಾಗಿದೆ. ಹಾಗೇ, ಗಲಾಟೆಯಲ್ಲಿ ನಾಲ್ವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಮ ಮಂದಿರದ ಆವರಣದಲ್ಲಿ ಗಲಾಟೆ ಶುರುವಾಗಿದೆ ಎಂಬ ವಿಷಯ ಕೇಳುತ್ತಿದ್ದಂತೆ ಪೊಲೀಸರು ಅಲ್ಲಿಗೆ ಧಾವಿಸಿದರು. ಆದರೆ ಅಲ್ಲಿ ಅತಿರೇಕದ ಹೊಡೆದಾಟ ನಡೆಯುತ್ತಿದ್ದರಿಂದ ಗುಂಪುಗಳನ್ನು ನಿಯಂತ್ರಿಸಲು ಅವರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ ವಾಹನಗಳೆಲ್ಲ ಧಗಧಗಿಸುತ್ತಿದ್ದವು. ಈ ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಮೂರು ತಂಡಗಳು ಅಲ್ಲಿಗೆ ಧಾವಿಸಿದ್ದವು. ಅಲ್ಲೀಗ ಪರಿಸ್ಥಿತಿ ಸರಿಯಾಗಿದ್ದರೂ ಇನ್ನೂ ಕೂಡ ಪೊಲೀಸ್ ಭದ್ರತೆ ಇದೆ. ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ನಾವು ಶ್ರೀರಾಮನ ದೇವಸ್ಥಾನದ ಬಳಿ ನಡೆಯುತ್ತಿದ್ದ ಗಲಾಟೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದೇವೆ. ಸ್ಥಳವೀಗ ಶಾಂತವಾಗಿದೆ ಎಂದು ಛತ್ರಪತಿ ಸಂಭಾಜಿನಗರದ ಪೊಲೀಸ್ ಆಯುಕ್ತ ನಿಖಿಲ್ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: Ram Navami 2023: ನಮ್ಮ ಅಜ್ಜಿಯರು ರಾಮನವಮಿಯ ಪಾನಕ ಹೀಗೆ ಮಾಡುತ್ತಿದ್ದರು!
ದೇವಸ್ಥಾನಕ್ಕೆ ಹಾನಿಯಾಗಿಲ್ಲ
ಇಷ್ಟೆಲ್ಲದರ ಮಧ್ಯೆ, ಕಿರಾದ್ಪುರ ಏರಿಯಾದಲ್ಲಿರುವ ಶ್ರೀರಾಮನ ದೇಗುಲಕ್ಕೆ ಹಾನಿಯಾಗಿದೆ. ದುಷ್ಕರ್ಮಿಗಳು ದೇವಾಲಯವನ್ನು ಹಾಳುಗೆಡವಿದ್ದಾರೆ ಎಂಬುದೊಂದು ಸುದ್ದಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಆದರೆ ಹಾಗೇನೂ ಆಗಿಲ್ಲ ಎಂದು ಎಐಎಂಐಎಂನ ರಾಷ್ಟ್ರೀಯ ಕಾರ್ಪೋರೇಟರ್ ಮೊಹಮ್ಮದ್ ನಾಸೀರುದ್ದೀನ್ ತಿಳಿಸಿದ್ದಾರೆ. ‘ರಾಮನ ದೇಗುಲಕ್ಕೆ ಹಾನಿ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ. ದೇವಾಲಯಕ್ಕೆ ಯಾವುದೇ ಹಾನಿಯೂ ಆಗಿಲ್ಲ. ಗಲಾಟೆ ನಡೆದ ಸ್ಥಳಕ್ಕೆ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರು ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ದಯವಿಟ್ಟು ಯಾರೂ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಎರಡೂ ಕೋಮಿನವರೂ ಶಾಂತವಾಗಿರುವಂತೆ ಹೇಳಿದ್ದಾರೆ’ ಎಂದು ನಾಸಿರುದ್ದೀನ್ ತಿಳಿಸಿದ್ದಾರೆ.
ಸಂಸದ ಇಮ್ತಿಯಾಜ್ ಅವರು ಪ್ರತಿಕ್ರಿಯೆ ನೀಡಿ ‘ಹಿಂದುಗಳಿಗೆ ರಾಮನವಮಿ ಅತ್ಯಂತ ಮುಖ್ಯವಾದ ಹಬ್ಬ. ಈ ನಗರದ ಜನರು ನಾವೆಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸಬೇಕು. ಆದರೆ ಕಿರಾದ್ಪುರದಲ್ಲಿ ಇಂಥದ್ದೊಂದು ಘಟನೆ ಆಗಬಾರದಿತ್ತು. ಈ ಬಗ್ಗೆ ವಿಷಾದ ಇದೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ಶಾಂತಿ ಕದಡುವ ಸಲುವಾಗಿ ಹೀಗೆ ಅವ್ಯವಸ್ಥೆ ಸೃಷ್ಟಿಸುತ್ತಿವೆ. ಸಿಸಿಟಿವಿ ಫೂಟೇಜ್ಗಳನ್ನು ಪೋಲೀಸರು ಪರಿಶೀಲನೆ ಮಾಡುತ್ತಿದ್ದು, ಆರೋಪಿಗಳು ಯಾರೇ ಆಗಿದ್ದರೂ ಅವರಿಗೆ ಖಂಡಿತ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.