ಆಂಧ್ರಪ್ರದೇಶದಲ್ಲಿ ಆಡಳಿತ ಪಕ್ಷ ವೈಎಸ್‌ಆರ್‌ಸಿಪಿ ಮತ್ತು ಪ್ರತಿಪಕ್ಷ ಟಿಡಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಆಂಧ್ರದ ಪಾಲ್ನಾಡು ಜಿಲ್ಲೆಯ ಮಾಚೆರ್ಲಾದಲ್ಲಿ ತೆಲುಗು ದೇಸಂ ಪಾರ್ಟಿ ಕಾರ್ಯಕರ್ತರು ‘ಇದೇಂ ಕರ್ಮಾ ರಾಷ್ಟ್ರನಿಕಿ’ ಎಂಬ ಕಾರ್ಯಕ್ರಮದಡಿ ಆಡಳಿತ ವೈಎಸ್‌ಆರ್‌ಸಿಪಿ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅಂದರೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಮನೆಮನೆಗೆ ಹೋಗಿ ಜಗನ್ ವೈಫಲ್ಯಗಳನ್ನು ತಿಳಿಸುತ್ತಿದ್ದರು. ಇದೇ ವೇಳೆ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು ಮುಖಾಮುಖಿಯಾಗಿ ಸಂಘರ್ಷ ಏರ್ಪಟ್ಟಿದೆ. ಮಾರಾಮಾರಿ ವಿಕೋಪಕ್ಕೆ ಹೋಗಿ, ಸದ್ಯ ಪಾಲ್ನಾಡು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಪಾಲ್ನಾಡುವಿನಲ್ಲಿದ್ದ ಟಿಡಿಪಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಕಲ್ಲು ಎಸೆದುಕೊಂಡಿದ್ದಾರೆ. ವೈಎಸ್‌ಆರ್‌ಸಿಪಿ ಕಾರ್ಯಕರ್ತರು ತೀವ್ರ ದಾಂಧಲೆ ಸೃಷ್ಟಿಸಿದರೂ, ಅವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಟಿಡಿಪಿ ಆರೋಪ ಮಾಡಿದೆ. ಈ ಮಧ್ಯೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಗುಂಟೂರು ಡಿಐಜಿಯನ್ನು ಸಂಪರ್ಕಿಸಿ, ಮಚೆರ್ಲಾದಲ್ಲಿ ಉಂಟಾದ ಉದ್ವಿಗ್ನತೆಯನ್ನು ಶಮನ ಮಾಡಿ, ವೈಎಸ್‌ಆರ್‌ಸಿಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಯಾಕೆ ವಿಫಲರಾದರು ಎಂದು ಪ್ರಶ್ನಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದೆ.
ಇದನ್ನೂ ಓದಿ: ವೈಎಸ್‌ಆರ್‌ಸಿಪಿ ತೊರೆದ ಸಿಎಂ ಜಗನ್ ರೆಡ್ಡಿ ತಾಯಿ; ಮಗಳಿದ್ದಲ್ಲಿಗೆ ಹೋಗುತ್ತೇನೆ ಎಂದ ವಿಜಯಮ್ಮ !