ಪಣಜಿ: ಗೋವಾದಲ್ಲಿ ಮೃತಪಟ್ಟ ಹರ್ಯಾಣ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಕೇಸ್ಗೆ ಸಂಬಂಧಪಟ್ಟಂತೆ ಗೋವಾ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. ಇದುವರೆಗೆ ಬಂಧಿತರ ಸಂಖ್ಯೆ 4ಕ್ಕೆ ಏರಿದೆ. ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದು, ಸೋನಾಲಿ ಫೋಗಟ್ ತಂಗಿದ್ದ ಹೋಟೆಲ್ನಲ್ಲಿರುವ ಕ್ಲಬ್ ಮಾಲೀಕ ಮತ್ತು ಒಬ್ಬ ಡ್ರಗ್ ಪೆಡ್ಲರ್ನನ್ನು. ಹಾಗೇ, ಈ ಕ್ಲಬ್ನ ವಾಶ್ರೂಂನಿಂದ ಮಾದಕ ದ್ರವ್ಯವನ್ನೂ ವಶಪಡಿಸಿಕೊಳ್ಳಲಾಗಿದೆ.
ಗೋವಾ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ, ‘ಕ್ಲಬ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಹಾಗಾಗಿ ಅದರ ಮಾಲೀಕನನ್ನು ಬಂಧಿಸಿದ್ದೇವೆ. ಪತ್ತೆಯಾದ ಮಾದಕ ದ್ರವ್ಯವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ಬಳಿಕವಷ್ಟೇ, ಅದು ಯಾವ ಡ್ರಗ್ಸ್ ಎಂಬುದು ಗೊತ್ತಾಗಲಿದೆ’ ಎಂದು ತಿಳಿಸಿದ್ದಾರೆ. ಸೋನಾಲಿ ಫೋಗಟ್ ಆಗಸ್ಟ್ 22ರಂದು ರಾತ್ರಿ ಮೃತಪಟ್ಟಿದ್ದರು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಪೋಸ್ಟ್ಮಾರ್ಟಮ್ ಮಾಡಿದಾಗ, ಸೋನಾಲಿ ಡ್ರಗ್ಸ್ ಸೇವನೆ ಮಾಡಿದ್ದು ದೃಢಪಟ್ಟಿತ್ತು. ಆಕೆ ಪಬ್ನಲ್ಲಿ ಅಮಲೇರಿದ ಸ್ಥಿತಿಯಲ್ಲಿ, ತೇಲಾಡುತ್ತ ಓಡಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದ್ದವು.
ಸೋನಾಲಿ ಹೃದಯಾಘಾತದಿಂದ ಮೃತಪಟ್ಟಿದ್ದಲ್ಲ, ಆಕೆಯದ್ದು ಹತ್ಯೆ ಎಂದು ಆಕೆಯ ಸಹೋದರ ರಿಂಕು ಢಾಕಾ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಶುರು ಮಾಡಿದ ಗೋವಾ ಪೊಲೀಸರು ಈಗಾಗಲೇ ಸೋನಾಲಿ ಬಾಡಿಗಾರ್ಡ್ ಸುಖವಿಂದರ್ ವಾಸಿ ಮತ್ತು ಪಿಎ ಸುಧೀರ್ ಸಂಗ್ವಾನ್ರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಈಗಾಗಲೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪಾನೀಯದಲ್ಲಿ ಅಮಲು ಪದಾರ್ಥ ಮಿಶ್ರಣ ಮಾಡಿ, ಸೋನಾಲಿಗೆ ಬಲವಂತವಾಗಿ ಕುಡಿಸಿದ್ದಾಗಿ ಅವರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಗೈದು ಕೊಲೆ?
ಸೋನಾಲಿ ಫೋಗಟ್ ತಂಗಿದ ಕೋಣೆಯಲ್ಲಿ ಬೇರೆ ಯಾರೋ ಇದ್ದರೂ ಎಂಬ ಕುರಿತು ಪೊಲೀಸರು ಮಾಹಿತಿ ನೀಡಿರುವ ಹಾಗೂ ಸೋನಾಲಿ ಅವರ ಸಂಬಂಧಿಕರು ಮಾಡಿರುವ ಆರೋಪಗಳನ್ನು ನೋಡಿದರೆ, ಬಿಜೆಪಿ ನಾಯಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಡ್ರಗ್ಸ್ ಹಾಗೂ ನಶೆ ಬರುವ ಕೆಮಿಕಲ್ ನೀಡಿದ ಕಾರಣ ಅರೆಪ್ರಜ್ಞಾವಸ್ಥೆಯಲ್ಲಿರುವ ಫೋಗಟ್ ಮೇಲೆ ಅತ್ಯಾಚಾರ ನಡೆದಿದೆ. ಬಳಿಕ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ ಎಂದು ಅನುಮಾನಿಸಲಾಗಿದೆ.
ಇದನ್ನೂ ಓದಿ: Sonali Phogat Death | ಮರಣೋತ್ತರ ವರದಿ ಬೆನ್ನಲ್ಲೇ ಸೋನಾಲಿ ಫೋಗಟ್ ಅವರ ಇಬ್ಬರು ಆಪ್ತರ ಬಂಧನ