ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾರ್ಯಕ್ರಮವೊಂದರಲ್ಲಿ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ, ಮಧ್ಯೆಯೇ ತಾಳ್ಮೆ ಕಳೆದುಕೊಂಡು ಕೂಗಾಡಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಸರ್ಕಾರದಿಂದಲೇ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್, ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯದರ್ಶಿ ಡಾ. ಹರಿಕೃಷ್ಣ ದ್ವಿವೇದಿ ಇನ್ನಿತರರು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿಯವರು ಫಲಾನುಭವಿಗಳಿಗೆ ಬೆಚ್ಚನೆಯ ಬಟ್ಟೆ ವಿತರಣೆ ಮಾಡಬೇಕಿತ್ತು. ಅಂದರೆ ಚಳಿಗಾಲ ಆಗಿದ್ದರಿಂದ ಸ್ವೆಟರ್ ಕೊಡಲು ನಿರ್ಧರಿಸಲಾಗಿತ್ತು. ಆದರೆ ಆ ಬಟ್ಟೆಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲಿಲ್ಲ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿಗೆಲ್ಲ ಬೈದು, ದೊಡ್ಡದಾಗಿ ಕೂಗಾಡಿದ್ದಾರೆ.
ಭಾಷಣ ಅರ್ಧದಲ್ಲಿಯೇ ನಿಲ್ಲಿಸಿ, ವೇದಿಕೆ ಮೇಲೆ ಕುರ್ಚಿಯಲ್ಲಿ ಕುಳಿತುಕೊಂಡ ಮಮತಾ ಬ್ಯಾನರ್ಜಿ ‘ಸ್ವೆಟರ್ಗಳು ಬರುವವರೆಗೂ ನಾನಿಲ್ಲಿಯೇ ಕಾಯುತ್ತೇನೆ. ಇಷ್ಟೊತ್ತಿಗೆ ಅದನ್ನು ಇಲ್ಲಿಗೆ ತರಬೇಕಿತ್ತು. ಅದೇನು ಆ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಕಚೇರಿಯಲ್ಲಿಯೇ ಮಲಗಿದ್ದಾನಾ? ಇಲ್ಲಿ 15 ಸಾವಿರ ಸ್ವೆಟರ್ಗಳನ್ನು ವಿತರಿಸಬೇಕಾಗಿದೆ. ಇನ್ನೂ ತರಲಿಲ್ಲವಲ್ಲ !’ ಎಂದು ದೊಡ್ಡದಾಗಿಯೇ ಕೂಗಾಡಿದ್ದಾರೆ. ಬಳಿಕ ಬಿಡಿಒನನ್ನು ವೇದಿಕೆಗೇ ಕರೆಸಿದರು. ಇಲ್ಲಿ ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ನಾನು ಕಠಿಣ ಕ್ರಮ ಕೈಗೊಂಡರೆ, ಕೊನೆಗೆ ನನ್ನನ್ನು ದೂಷಿಸಬೇಡಿ’ ಎಂದು ಖಾರವಾಗಿ ಹೇಳಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರದಿಂದ ಮೂರು ದಿನಗಳ ಸುಂದರ್ಬನ್ ಪ್ರವಾಸ ಹಮ್ಮಿಕೊಂಡಿದ್ದಾರೆ. ಇಂದು ಬೆಳಗ್ಗೆ ಅವರು ದೇವಸ್ಥಾನವೊಂದಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದರು. ಉತ್ತರ 24 ಪರಗಣವನ್ನು ವಿಭಜಿಸಿ, ಸುಂದರ್ಬನ್ ಮತ್ತು ಬಸಿರ್ಹತ್ ಎಂಬ ಎರಡು ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ. ಆದರೆ ಅದರ ಅಧಿಕೃತ ಘೋಷಣೆಯಾಗಿಲ್ಲ. ಮಮತಾ ಬ್ಯಾನರ್ಜಿಯವರು ಈಗಿನ ಭೇಟಿಯಲ್ಲೇ ಅಧಿಕೃತವಾಗಿ ನೂತನ ಎರಡು ಜಿಲ್ಲೆಗಳ ಹೆಸರನ್ನು ಘೋಷಿಸಲಿದ್ದಾರೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಬ್ರಾಹ್ಮಣರನ್ನು ಅವಹೇಳನ ಮಾಡಿದ ಟಿಎಂಸಿ ನಾಯಕ; ಮಮತಾ ಬ್ಯಾನರ್ಜಿಯೂ ಅದೇ ಸಮುದಾಯ ಎನ್ನುತ್ತಿದ್ದಂತೆ ಟ್ವೀಟ್ ಡಿಲೀಟ್ !