ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಅವರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ಕೈಲಾಶ್ ವಿಜಯವರ್ಗಿಯ ಒಂದು ವಿವಾದ ಹುಟ್ಟುಹಾಕಿದ್ದಾರೆ. ನಿತೀಶ್ ಕುಮಾರ್ ಅವರು ಬಿಜೆಪಿ ತೊರೆದು, ಆರ್ಜೆಡಿಯೊಟ್ಟಿಗೆ ಹೋಗಿ ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಿ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಕಿಡಿ ಕಾರುತ್ತಿದ್ದಾರೆ. ಅದರಲ್ಲೀಗ ಕೈಲಾಶ್ ವಿಜಯವರ್ಗಿಯ ತುಸು ಮುಂದುವರಿದು ಮಾತನಾಡಿದ್ದಾರೆ. ‘ವಿದೇಶಿ ಮಹಿಳೆಯರು ಯಾವುದೇ ಸಮಯದಲ್ಲಿ ಬೇಕಾದರೂ ತಮ್ಮ ಪ್ರಿಯತಮನನ್ನು ಬದಲಿಸುವಂತೆ ನಿತೀಶ್ ಕುಮಾರ್ ಪಕ್ಷ ಬದಲಿಸುತ್ತಾರೆ’ ಎಂದು ಹೇಳಿ ದೊಡ್ಡದಾಗಿ ನಕ್ಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕೆಲವು ದಿನಗಳ ಮಟ್ಟಿಗೆ ವಿದೇಶಕ್ಕೆ ಹೋಗಿದ್ದೆ. ಆಗ ಒಂದಿಬ್ಬರು ನನಗೆ, ‘ಇಲ್ಲಿನ ಮಹಿಳೆಯರು ಯಾವಾಗ ಬೇಕಂದರೆ, ಆವಾಗ ತಮ್ಮ ಬಾಯ್ಫ್ರೆಂಡ್ನ್ನು ಬದಲಿಸುತ್ತಾರೆ’ ಎಂಬ ವಿಷಯ ತಿಳಿಸಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಹಾಗೇ, ಅವರು ಯಾವಾಗ ಯಾರ ಕೈ ಹಿಡಿಯುತ್ತಾರೆ, ಯಾರನ್ನು ಕೈಬಿಡುತ್ತಾರೆ ಒಂದೂ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು.
ಕೈಲಾಶ್ ವಿಜಯವರ್ಗಿಯ ಈ ಮಾತುಗಳನ್ನು ಕಾಂಗ್ರೆಸ್ ಖಂಡಿಸಿದೆ. ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ವಿಜಯ್ ಮಾತನಾಡಿದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ‘ನಾವು ಹೆಚ್ಚೇನೂ ಹೇಳಬೇಕಾಗಿಲ್ಲ. ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಮಹಿಳೆಯರ ಮೇಲೆ ಇರುವ ಗೌರವ ಎಷ್ಟು ಎಂಬುದು ಇದರಲ್ಲೇ ಗೊತ್ತಾಗುತ್ತದೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಹಾಗೇ ಕಾಂಗ್ರೆಸ್ನ ಇನ್ನೂ ಹಲವು ನಾಯಕರು ಕೈಲಾಶ್ ಮಾತುಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ನಿತೀಶ್ ಕುಮಾರ್ ಅವರು ಆಗಸ್ಟ್ 9ರಂದು ಎನ್ಡಿಎ ಒಕ್ಕೂಟವನ್ನುನ ತೊರೆದು, ಆಗಸ್ಟ್ 10ರಂದು ಆರ್ಜೆಡಿ ಮತ್ತು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಿದ್ದಾರೆ. ಹೀಗೆ ಮೈತ್ರಿ ಬದಲಿಸುವ ಮೂಲಕ ನೀವು ನಮಗೆ ಮತ್ತು ಜನರಿಗೆ ನಂಬಿಕೆ ದ್ರೋಹ ಮಾಡಿದ್ದೀರಿ ಎಂದು ಬಿಜೆಪಿ ಕಿಡಿಕಾರುತ್ತಿದೆ. ಎನ್ಡಿಎಯ ಒಳೆದು ಆಳುವ ನೀತಿ ನಮಗೆ ಇಷ್ಟವಾಗುತ್ತಿಲ್ಲ. ಹಾಗಾಗಿಯೇ ನಾವು ಬೇರೆಯಾಗಿದ್ದೇವೆ ಎಂದು ನಿತೀಶ್ ಕುಮಾರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bihar Politics | ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತು ಆಗಸ್ಟ್ 24ಕ್ಕೆ; ಯಾಕಿಷ್ಟು ವಿಳಂಬ?