ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾರಾಣಸಿಯಿಂದ ಲಖನೌಗೆ ತೆರಳುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡ್ ಆಗಿದೆ. ಶನಿವಾರ ವಾರಾಣಸಿಗೆ ಹೋಗಿದ್ದ ಯೋಗಿ ಆದಿತ್ಯನಾಥ್ ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ ಬಳಿಕ ಅಲ್ಲಿಯೇ ತಂಗಿದ್ದರು. ಇಂದು ಮುಂಜಾನೆ ಅವರು ಲಖನೌಗೆ ಹೊರಟಿದ್ದರು. ವಾರಾಣಸಿಯ ರಿಸರ್ವ್ ಪೊಲೀಸ್ ಲೈನ್ಸ್ ಮೈದಾನದಿಂದ ಹೆಲಿಕಾಪ್ಟರ್ ಟೇಕ್‌ಆಫ್ ಆಗಿತ್ತು. ಆದರೆ ಸ್ವಲ್ಪ ಹೊತ್ತಲ್ಲೇ ಹೆಲಿಕಾಪ್ಟರ್‌ಗೆ ಹಕ್ಕಿಯೊಂದು ಡಿಕ್ಕಿ ಹೊಡೆದ ಕಾರಣ ತುರ್ತಾಗಿ ಲ್ಯಾಂಡ್ ಆಗಿದೆ. ಯಾವುದೇ ಅಪಾಯ ಅಗಲಿಲ್ಲ. ಆದಿತ್ಯನಾಥ್ ಅವರು ಸರ್ಕೀಟ್ ಹೌಸ್‌ಗೆ ಹೋಗಿ, ಮತ್ತೊಂದು ವಿಮಾನದ ಮೂಲಕ ಲಖನೌಗೆ ತೆರಳಿದರು ಎಂದು ವರದಿಯಾಗಿದೆ.
ಶನಿವಾರ ಬೆಳಗ್ಗೆ ಯೋಗಿ ಆದಿತ್ಯನಾಥ್ ಲಖನೌದ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಾಮಿತ್ವ ಯೋಜನೆಯ ಫಲಾನುಭವಿಗಳಾದ ಸುಮಾರು 11 ಲಕ್ಷ ಕುಟುಂಬಗಳಿಗೆ ದಾಖಲೆ ಪತ್ರಗಳನ್ನು ವಿತರಿಸಿದರು. 2023ರ ಅಕ್ಟೋಬರ್ ವೇಳೆ ಉತ್ತರ ಪ್ರದೇಶದ ಸುಮಾರು 2.5 ಕೋಟಿ ಜನರು ಸ್ವಾಮಿತ್ವ ಪ್ರಮಾಣಪತ್ರ ಪಡೆಯಲಿದ್ದಾರೆ ಎಂದು ತಿಳಿಸಿದರು. ಸ್ವಾಮಿತ್ವ ಯೋಜನೆಯನ್ನು ಕೇಂದ್ರ ಸರ್ಕಾರ 2020ರಲ್ಲಿ ಪ್ರಾರಂಭಿಸಿದ್ದು, ಇದರಡಿಯಲ್ಲಿ ಭೂಮಾಲೀಕರಿಗೆ ಬ್ಯಾಂಕ್ ಸಾಲ ದೊರೆಯುವುದಲ್ಲದೆ, ಭೂಮಿಗೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸುಧಾರಣೆ ಮತ್ತು ಸಮೀಕ್ಷೆಗೆ ಡಿಜಿಟಲ್ ಟಚ್ ಕೊಟ್ಟು ರೂಪಿಸಲಾದ ಯೋಜನೆ ಇದು.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ 50ನೇ ಹುಟ್ಟುಹಬ್ಬ; ಡೈನಾಮಿಕ್ ಸಿಎಂ ಎಂದು ಹೊಗಳಿದ ಪ್ರಧಾನಿ ಮೋದಿ