ತಿರುವನಂತಪುರ: ಕರಾವಳಿ ಕಾವಲುಪಡೆಗೆ (Coast Guard) ಸೇರಿದ ಹೆಲಿಕಾಪ್ಟರ್ ಟೇಕ್ಆಫ್ ಆಗುವ ವೇಳೆ ಪತನಗೊಂಡು ಮೂವರು ಗಾಯಗೊಂಡಿದ್ದಾರೆ. ಕೇರಳದ ಕೊಚ್ಚಿಯ ನೆಡಂಬಸ್ಸೆರಿ ಏರ್ಪೋರ್ಟ್ನಲ್ಲಿ ಘಟನೆ ನಡೆದಿದೆ. ಹೆಲಿಕಾಪ್ಟರ್ ಕೆಳಹಂತದಲ್ಲಿರುವಾಗಲೇ ಬಿದ್ದದ್ದರಿಂದ ಅದರಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆಲಿಕಾಪ್ಟರ್ ಕರಾವಳಿ ಕಾವಲು ಪಡೆಯ ತರಬೇತಿಗೆ ಮೀಸಲಾಗಿತ್ತು. ವಿಮಾನ ನಿಲ್ದಾಣದಿಂದ ಹೊರಟು ಅದರು ತರಬೇತಿ ಹಾರಾಟ ನಡೆಸಬೇಕಿತ್ತು. ಅಂತೆಯೇ ಮಧ್ಯಾಹ್ನ 12.30ರ ವೇಳೆಗೆ ಟೇಕ್ಆಫ್ ಆಗಲು ಅದಕ್ಕೆ ಸಿಗ್ನಲ್ ದೊರಕಿದೆ. ಅಂತೆಯೇ ಮೊದಲ ಹಂತದ ಪ್ರಕ್ರಿಯೆಗಳು ಮುಗಿದು ಮೇಲಕ್ಕೇರುತ್ತಿದ್ದಂತೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಹೆಲಿಕಾಪ್ಟರ್ನ ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಿಧಾನವಾಗಿ ಅದು ನೆಲಕ್ಕೆ ಅಪ್ಪಳಿಸಿದೆ.
ಇದನ್ನೂ ಓದಿ : IAF Fighter Jets Crash: ಯುದ್ಧ ವಿಮಾನ ಪತನ; ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ನಿವಾಸದಲ್ಲಿ ನೀರವ ಮೌನ
ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿರುವ ಕಾರಣ ಅಲ್ಲಿನ ರಕ್ಷಣಾ ಸಿಬ್ಬಂದಿ ತಕ್ಷಣ ಒಳಗಿದ್ದ ಸಿಬ್ಬಂದಿಗೆ ನೆರವು ಒದಗಿಸಿದ್ದಾರೆ. ಪತನಗೊಂಡ ಹೆಲಿಕಾಪ್ಟರ್ನಿಂದ ಅವರನ್ನು ಹೊರಕ್ಕೆ ಎಳೆದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೀಗಾಗಿ ಹೆಚ್ಚಿನ ಹಾನಿ ಉಂಟಾಗಿಲ್ಲ. ಅದೇ ರೀತಿ ಯಾವುದೇ ಆಸ್ತಿ-ಪಾಸ್ತಿಗೂ ನಷ್ಟ ಉಂಟಾಗಿಲ್ಲ ಎಂದು ಕೋಸ್ಟ್ ಗಾರ್ಡ್ನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಘಟನೆಗೆ ಕಾರಣ ಏನು ಎಂಬದನ್ನು ಅಧಿಕಾರಿಗಳು ಬಹಿರಂಗ ಮಾಡಿಲ್ಲ.
ವಿಮಾನ ನಿಲ್ದಾಣ ಮೂರು ಗಂಟೆ ಬಂದ್
ಕೊಚ್ಚಿ ವಿಮಾನ ನಿಲ್ದಾಣದ ರನ್ವೇ ಬಳಿ ಘಟನೆ ನಡೆದಿರುವ ಕಾರಣ ಮೂರು ಗಂಟೆ ಕಾಲ ಅಲ್ಲಿ ವಿಮಾನಗಳ ಕಾರ್ಯಾಚರಣೆ ನಿಲ್ಲಿಸಲಾಯಿತು. ತೆರವು ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ಕೊಚ್ಚಿಯಲ್ಲಿ ಇಳಿಯಬೇಕಾಗಿದ್ದ ವಿಮಾನಗಳನ್ನು ಬೇರೆ ಕಡೆಗೆ ಕಳುಹಿಸಿಕೊಡಲಾಯಿತು. ಅದೇ ರೀತಿ ಅಲ್ಲಿಂದ ಹೊರಡಬೇಕಿದ್ದ ವಿಮಾನಗಳು ಮೂರು ಗಂಟೆ ತಡವಾಗಿ ಹಾರಾಟ ಶುರು ಮಾಡಿತು.