ನವ ದೆಹಲಿ: 2022ರ ಅಕ್ಟೋಬರ್ 23ರಂದು ತಮಿಳುನಾಡಿನ ಕೊಯಮತ್ತೂರಿನ ಕೊಟ್ಟಾಮೇಡು ಸಂಗಮೇಶ್ವರ ದೇವಸ್ಥಾನದ ಸಮೀಪ ಮಾರುತಿ 800 ಕಾರೊಂದರಲ್ಲಿ ಉಂಟಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಭಯೋತ್ಪಾದನಕಾ ಕೃತ್ಯವೆಂದು ಸಾಬೀತಾಗಿದ್ದು, ಈ ಕೇಸ್ನ್ನು ರಾಷ್ಟ್ರೀಯ ತನಿಖಾ ದಳ ಈಗಾಗಲೇ ಕೈಗೆತ್ತಿಕೊಂಡಿದೆ. ಈ ಕೊಯಮತ್ತೂರ್ ಸಿಲಿಂಡರ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಇದೀಗ ಎನ್ಐಎ ತಮಿಳುನಾಡು-ಕೇರಳ ಮತ್ತು ಕರ್ನಾಟಕ ಸೇರಿ ಒಟ್ಟು 60 ಪ್ರದೇಶಗಳಲ್ಲಿ ದಾಳಿ (NIA Raid) ಮಾಡಿದೆ. ಈ ಹಿಂದೆ ನವೆಂಬರ್ನಲ್ಲಿ ತಮಿಳುನಾಡಿನಲ್ಲಿ ಚೆನ್ನೈ ಸೇರಿ 45 ಪ್ರದೇಶಗಳಲ್ಲಿ ತನಿಖಾ ದಳ ರೇಡ್ ಮಾಡಿತ್ತು.
ಅಕ್ಟೋಬರ್ 23ರಂದು ಕೊಯಮತ್ತೂರಿನಲ್ಲಿ ಕಾರಲ್ಲಿ ನಡೆದ ಸ್ಫೋಟದಲ್ಲಿ ಜಮೇಶಾ ಮುಬೀನ್ ಎಂಬಾತ ಮೃತಪಟ್ಟಿದ್ದ. ಈತನೇ ಸ್ಫೋಟದ ರೂವಾರಿ ಎಂದು ಹೇಳಲಾಗಿದೆ. ಕಾರು ಸ್ಫೋಟಗೊಂಡ ರಭಸಕ್ಕೆ ಅವನ ದೇಹ ಕಾರಿನಿಂದ ಸ್ವಲ್ಪದೂರ ಹೋಗಿ ಬಿದ್ದಿತ್ತು. ಪೊಲೀಸರ ಪ್ರಾರಂಭಿಕ ಹಂತದ ತನಿಖೆಯಲ್ಲೇ ಇದೊಂದು ಉಗ್ರಕೃತ್ಯ ಎಂದು ಸಾಬೀತಾಗಿತ್ತು. ಹೀಗಾಗಿ ಎನ್ಐಎ ತನಿಖೆ ಕೈಗೆತ್ತಿಕೊಂಡಿದೆ. ಇದುವರೆಗೆ ಈ ಕೇಸ್ಗೆ ಸಂಬಂಧಪಟ್ಟಂತೆ 6 ಮಂದಿಯನ್ನು ಬಂಧಿ, ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: Coimbatore Blast | ಕೊಯಮತ್ತೂರು ಸ್ಫೋಟ ಕೇಸಿನಲ್ಲಿ ನಾಲ್ವರ ಬಂಧನ, ಮುಬಿನ್ ಮನೆಗೆ ಕರೆದೊಯ್ದು ತನಿಖೆ
ಇನ್ನು ಮುಬೀನ್ ಮೃತಪಟ್ಟ ನಂತರ ಆತನಿಗೆ ಸಂಬಂಧಪಟ್ಟಂತ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅವನ ಮನೆಯಲ್ಲಿದ್ದ 75 ಕೆಜಿ ಸ್ಫೋಟಕ. ಐಸಿಸ್ ಉಗ್ರ ಸಂಘಟನೆಯ ಧ್ವಜವನ್ನು ಹೋಲುವ ರೇಖಾಚಿತ್ರ, ಅಲ್ಲಾನ ಹೆಸರಿಗೆ ಅವಮಾನ ಮಾಡಿದವರನ್ನು ಜೀವಸಹಿತ ಬಿಡುವುದಿಲ್ಲ ಎಂಬ ಬರಹಗಳುಳ್ಳ ದಾಖಲೆಗಳನ್ನು ತನಿಖಾ ದಳ ವಶಪಡಿಸಿಕೊಂಡಿದೆ. ಹೀಗಾಗಿ ಕೊಯಮತ್ತೂರು ಸ್ಫೋಟಕ್ಕೆ ಐಸಿಸ್ ಲಿಂಕ್ ಇರುವುದು ಸಾಬೀತಾಗಿದೆ. ಆದರೆ ಈ ಲಿಂಕ್ನ ಆಳ ಎಷ್ಟಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.