Site icon Vistara News

Sabarimala Temple : ಶಬರಿಮಲೆಯಲ್ಲಿ ನಾಣ್ಯಗಳನ್ನು ಲೆಕ್ಕ ಹಾಕುವ ಮೆಷಿನ್‌! ಏನಿದರ ವಿಶೇಷ?

coin counting machine in sabarimala

ತಿರುವನಂತಪುರಂ: ಆಂಧ್ರ ಪ್ರದೇಶದ ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಪ್ರತಿನಿತ್ಯ ಕೋಟ್ಯಂತರ ರೂ. ಕಾಣಿಕೆ ಬೀಳುತ್ತದೆ. ಅದರಲ್ಲಿ ಎಷ್ಟೋ ಲಕ್ಷ ನಾಣ್ಯಗಳೂ ಸೇರಿಕೊಂಡಿರುತ್ತವೆ. ನೋಟುಗಳನ್ನು ಎಣಿಕೆ ಮಾಡಲು ಯಂತ್ರವಿರುವಂತೆಯೇ ಅಲ್ಲಿ ನಾಣ್ಯಗಳನ್ನು ಎಣಿಸುವುದಕ್ಕೂ ಯಂತ್ರವನ್ನು ಇಟ್ಟುಕೊಳ್ಳಲಾಗಿದೆ. ಈ ಮೆಷಿನ್‌ ತಂತ್ರವನ್ನು ಇದೀಗ ಕೇರಳದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶಬರಿಮಲೆಯಲ್ಲೂ ಬಳಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರದಲ್ಲೇ ಶಬರಿಮಲೆ ದೇವಸ್ಥಾನದಲ್ಲೂ (Sabarimala Temple) ನಾಣ್ಯಗಳನ್ನು ಎಣಿಕೆ ಮಾಡುವ ಮೆಷಿನ್‌ ಕೆಲಸ ಆರಂಭಿಸಲಿದೆ.

ಅಂದ ಹಾಗೆ ಈ ರೀತಿಯ ವಿಶೇಷ ಮೆಷಿನ್‌ ಅನ್ನು ಬೆಂಗಳೂರಿನ ಸ್ಪೂಕ್‌ ಫಿಶ್‌ ಹೆಸರಿನ ಸಂಸ್ಥೆ ತಯಾರಿಸಿದೆ. ಶಬರಿಮಲೆಯಲ್ಲಿ ಈ ಮೆಷಿನ್‌ ಅನ್ನು ಅಳವಡಿಸಲು ದೇವಸ್ವಂ ಬೋರ್ಡ್‌ನ ಅಧ್ಯಕ್ಷರಾದ ಕೆ. ಅನಂತ ಗೋಪನ್‌ ಅವರನ್ನೊಳಗೊಂಡ ತಂಡ ರಚಿಸಲಾಗಿದೆ. ಅವರು ಈಗಾಗಲೇ ತಿರುಪತಿಗೆ ತೆರಳಿ ಅಲ್ಲಿ ಮಷಿನ್‌ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮಹಿಳೆಯನ್ನು ನದಿಗೆ ಎಳೆದೊಯ್ದು, ಸಜೀವವಾಗಿ ತಿಂದ ಮೊಸಳೆ!
ಈ ಮೆಷಿನ್‌ ಅಳವಡಿಕೆಗೆ ಒಟ್ಟು ಮೂರು ಕೋಟಿ ರೂಪಾಯಿ ಖರ್ಚಾಗಲಿದೆ. ಅದರಲ್ಲಿ ಶೇ.60 ಹಣವನ್ನು ಶಬರಿಮಲೆಯು ಯಂತ್ರ ಕೊಳ್ಳುವುದಕ್ಕೆ ಮೊದಲೇ ಪಾವತಿಸಬೇಕಿದೆ. ಮೆಷಿನ್‌ ಅಳವಡಿಕೆ ಕೆಲಸಕ್ಕೆ ಸುಮಾರು ಏಳು ತಿಂಗಳು ಸಮಯಾವಧಿ ತೆಗೆದುಕೊಳ್ಳಲಿದೆ. ಈ ಮೆಷಿನ್‌ನಲ್ಲಿ ವಿಶೇಷ ಸೆನ್ಸರ್‌ಗಳನ್ನೂ ಅಳವಡಿಸಲು ಬೋರ್ಡ್‌ ಚಿಂತನೆ ನಡೆಸಿದೆ ಎಂದು ತಿಳಿಸಲಾಗಿದೆ. ಈ ಮೆಷಿನ್‌ ಒಂದು ನಿಮಿಷದಲ್ಲಿ 300 ನಾಣ್ಯಗಳನ್ನು ಎಣಿಕೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹೊಂದಿರುವ ಈ ಮಷಿನ್‌ ನಾಣ್ಯದ ಎರಡೂ ಮುಖವನ್ನು ಪರಿಶೀಲಿಸಲಿದೆ. ಆಯಾ ನಾಣ್ಯಗಳ ತೂಕವನ್ನು ಪರಿಶೀಲಿಸಿ ಅದರಂತೆ ಅವುಗಳನ್ನು ಬೇರೆ ಮಾಡಲಿದೆ. ಕೊನೆಯಲ್ಲಿ ನಾಣ್ಯಗಳನ್ನು ಪಾಕೆಟ್‌ನಲ್ಲಿ ಕೊಡಲಿದೆ.

ಇದನ್ನೂ ಓದಿ: Viral Video : ಮೆಟ್ರೋದಲ್ಲಿ ಸೀಟಿಗಲ್ಲ, ನಿಲ್ಲುವ ಜಾಗಕ್ಕಾಗಿಯೇ ಮಹಿಳೆಯರ ಮಾರಾಮಾರಿ!
ಈ ಮೆಷಿನ್‌ನಿಂದಾಗಿ ಸಮಯ ಹಾಗೂ ಕೆಲಸದ ಉಳಿತಾಯವಾಗಲಿದೆ. ಕಳೆದ ವರ್ಷ ಶಬರಿಮಲೆಯಲ್ಲಿ 20 ಕೋಟಿ ರೂ. ಮೌಲ್ಯದ ನಾಣ್ಯಗಳನ್ನು ಲೆಕ್ಕ ಹಾಕುವುದಕ್ಕೆ ಒಂದು ಸಾವಿರ ಸಿಬ್ಬಂದಿಯನ್ನು ಮೂರು ತಿಂಗಳ ಕಾಲ ದುಡಿಸಿಕೊಳ್ಳಲಾಗಿತ್ತು. ಈ ಕೆಲಸಕ್ಕೆಂದೇ ಸುತ್ತ ಮುತ್ತಲಿನ ದೇವಸ್ಥಾನಗಳ ಸಿಬ್ಬಂದಿಯನ್ನೂ ಕರೆಸಿಕೊಳ್ಳಲಾಗಿತ್ತು. ಎಲ್ಲರಿಗೂ ಸಂಬಳದ ರೂಪದಲ್ಲಿ ಹಣ ನೀಡಲಾಗಿತ್ತು. ಬೇರೆ ದೇವಸ್ಥಾನಗಳ ಸಿಬ್ಬಂದಿಯೂ ಈ ಕೆಲಸಕ್ಕೆ ಬಂದಿದ್ದರಿಂದ ಅಲ್ಲಿ ಕೆಲಸಗಾರರಿಲ್ಲದಂತಾಗಿ ಆ ದೇವಸ್ಥಾನಗಳಲ್ಲಿ ತೊಂದರೆಯುಂಟಾಗಿತ್ತು. ಅದೇ ಕಾರಣಕ್ಕೆ ಇದೀಗ ಶಬರಿಮಲೆ ದೇವಸ್ಥಾನ ಮಂಡಳಿಯು ನಾಣ್ಯಗಳನ್ನು ಎಣಿಸುವ ಯಂತ್ರದ ಮೊರೆ ಹೋಗಲು ಸಿದ್ಧವಾಗಿದೆ.

Exit mobile version