ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ಮುಂಬಯಿ-ಗೋವಾ ಹೆದ್ದಾರಿಯಲ್ಲಿ ಇಂದು ಮುಂಜಾನೆ ಭೀಕರ ಅಪಘಾತವಾಗಿದ್ದು, 9 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 4 ವರ್ಷದ ಒಂದು ಮಗು, ನಾಲ್ವರು ಮಹಿಳೆಯರು ಸೇರಿ ಒಂಭತ್ತೂ ಜನ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ವರದಿಯಾಗಿದೆ.
ಇಕೊ ಕಾರು ಮತ್ತು ಟ್ರಕ್ ರೆಪೋಲಿ ಎಂಬ ಹಳ್ಳಿಯಲ್ಲಿ ಇಂದು ಮುಂಜಾನೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ. ಇದರಲ್ಲಿ ಟ್ರಕ್ ಚಾಲಕನದ್ದೇ ತಪ್ಪಿದೆ. ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಟ್ರಕ್ ಮುಂಬಯಿನತ್ತ ಸಾಗುತ್ತಿತ್ತು. ಕಾರು ರತ್ನಗಿರಿ ಜಿಲ್ಲೆಯ ಗುಹಾಗರ್ಗೆ ತೆರಳುತ್ತಿತ್ತು. ಟ್ರಕ್ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಸ್ಥಿತಿಯೇ ಅಪಘಾತದ ತೀವ್ರತೆಯನ್ನು ಹೇಳುತ್ತಿದೆ ಎಂದೂ ಪೊಲೀಸರು ಹೇಳಿದ್ದಾರೆ. ಅಪಘಾತದ ಬೆನ್ನಲ್ಲೇ ಹೈವೇದಲ್ಲಿ ಸಂಚಾರ ತೊಡಕಾಗಿತ್ತು.
ಉತ್ತರ ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ಬಸ್
ಇನ್ನೊಂದೆಡೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲೂ ಮುಂಜಾನೆಯೇ ಒಂದು ಅಪಘಾತವಾಗಿದ್ದು ಇದರಲ್ಲಿ 24 ಮಂದಿ ಗಾಯಗೊಂಡಿದ್ದಾರೆ. ಸುಮಾರು 50 ಮಂದಿ ಪ್ರಯಾಣಿಕರು ಇದ್ದ ಬಸ್ವೊಂದು ನಿಯಂತ್ರಣ ತಪ್ಪಿ, ಹೈ ಟೆನ್ಷನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದಿದೆ. ಈ ಬಸ್ ಗೋರಖ್ಪುರದಿಂದ ಮಹಾರಾಜಗಂಜ್ಗೆ ಬರುತ್ತಿತ್ತು. ಬಸ್ ಚಾಲಕ ಅತಿಯಾದ ವೇಗದಲ್ಲಿ ಚಾಲನೆ ಮಾಡುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವು ಪ್ರಯಾಣಿಕರು ವಿದ್ಯುತ್ ಶಾಕ್ಗೆ ಕೂಡ ಒಳಗಾಗಿದ್ದಾರೆ. ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್-ಬೈಕ್ ನಡುವೆ ಭೀಕರ ಅಪಘಾತ; ಸವಾರನ ತಲೆ ಹೋಳು