ಮುಂಬೈ: ಆಗಸ್ಟ್ 10ರಂದು ಹೃದಯಾಘಾತಕ್ಕೀಡಾಗಿ, ಕಳೆದ 15ದಿನಗಳಿಂದಲೂ ದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಸ್ಯನಟ ರಾಜು ಶ್ರೀವಾಸ್ತವ ಆರೋಗ್ಯದ ಬಗ್ಗೆ ಒಂದು ಆಶಾದಾಯಕ ಅಪ್ಡೇಟ್ ಸಿಕ್ಕಿದೆ. ಇಷ್ಟೂ ದಿನ ಎಚ್ಚರವಿಲ್ಲದ ಸ್ಥಿತಿಯಲ್ಲೇ ಇದ್ದ ರಾಜು ಶ್ರೀವಾಸ್ತವ್ರಿಗೆ ಇಂದು ಪ್ರಜ್ಞೆ ಮರಳಿದೆ. ಆಗಸ್ಟ್ 10ರಂದು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ರಾಜು ಶ್ರೀವಾಸ್ತವ್ರಿಗೆ ಹೃದಯಾಘಾತವಾಗಿತ್ತು. ಅಂದಿನಿಂದಲೂ ದೆಹಲಿಯ ಏಮ್ಸ್ನಲ್ಲೇ ದಾಖಲಾಗಿದ್ದರು. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ.
ಅಂದು ಮುಂಜಾನೆ ಜಿಮ್ ಸೆಂಟರ್ನಲ್ಲಿ ರಾಜು ಶ್ರೀವಾಸ್ತವ್ ಬಿದ್ದಾಗ, ಅವರ ತರಬೇತುದಾರ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರು. ಶ್ರೀವಾಸ್ತವ್ ಹೃದಯಕ್ಕೆ ಎರಡು ಸ್ಟೆಂಟ್ ಅಳವಡಿಸಲಾಗಿದೆ. ಅವರು ಹುಷಾರಾಗಿ ಬರಲಿ ಎಂದು ಅನೇಕ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದರು. ಅಂತೂ ಇಂದು ಮುಂಜಾನೆ 8.10ರ ಹೊತ್ತಿಗೆ ಅವರಿಗೆ ಎಚ್ಚರವಾಗಿದೆ. ಈ ಬಗ್ಗೆ ರಾಜು ಶ್ರೀವಾಸ್ತವ್ ಪಿಆರ್ಒ ಮತ್ತು ಸಲಹೆಗಾರ ಅಜಿತ್ ಸಕ್ಷೇನಾ ಮಾಹಿತಿ ನೀಡಿದ್ದಾರೆ. ಹಾಗೇ, ರಾಜು ಅವರಿಗೆ ಪ್ರಜ್ಞೆ ಬಂದ ಬೆನ್ನಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದೂ ತಿಳಿಸಿದ್ದಾರೆ.
ರಾಜು ಶ್ರೀವಾಸ್ತವ ಅವರು 1980ರಲ್ಲಿಯೇ ಮನರಂಜನೆ ಕ್ಷೇತ್ರ ಪ್ರವೇಶಿಸಿ ಹ್ಯಾಸನಟರಾಗಿ ಗುರುತಿಸಿಕೊಂಡಿದ್ದಾರೆ. “ಬಾಜಿಗರ್”, “ಮೈನೆ ಪ್ಯಾರ್ ಕಿಯಾ”, “ಬಾಂಬೆ ಟು ಗೋವಾ” ಸೇರಿ ಬಾಲಿವುಡ್‌ನ (Bollywood) ಹಲವು ಸಿನಿಮಾಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. 2005ರಲ್ಲಿ ಆರಂಭವಾದ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಖ್ಯಾತಿ ಗಳಿಸುವ ಜತೆಗೆ ಸ್ಟ್ಯಾಂಡಪ್ ಕಮಿಡಿಯನ್ ಆಗಿಯೂ ರೂಪುಗೊಂಡರು. ಇನ್ನು, “ಪೇಟ್ ಸಫಾ” ಜಾಹೀರಾತಂತೂ ರಾಜು ಶ್ರೀವಾಸ್ತವ ಅವರನ್ನು ಮನೆಮಾತಾಗಿಸಿದೆ.
ಇದನ್ನೂ ಓದಿ: Sonam Kapoor | ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಸೋನಂ ಕಪೂರ್