ಹೊಸದಿಲ್ಲಿ: ಬಾಲಿವುಡ್‌ನ ಖ್ಯಾತ ಹಾಸ್ಯ ನಟ, ಸ್ಟ್ಯಾಂಡಪ್ ಕಮಿಡಿಯನ್ ರಾಜು ಶ್ರೀವಾಸ್ತವ (Raju Srivastava) ಆರೋಗ್ಯದಲ್ಲಿ ಯಾವುದೇ ಚೇತರಿಕೆ ಆಗಿಲ್ಲ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದು, ಲಕ್ಷಾಂತರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಆ.10ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ರಾಜು ಅವರಿಗೆ ಹೃದಯಾಘಾತವಾಗಿದ್ದು, ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ವೈದ್ಯರ ಚಿಕಿತ್ಸೆ ಹೊರತಾಗಿಯೂ ರಾಜು ಶ್ರೀವಾಸ್ತವ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಹಾಗಾಗಿ, ಅವರ ಎಲ್ಲ ಕುಟುಂಬಸ್ಥರು ಏಮ್ಸ್‌ಗೆ ಆಗಮಿಸಿದ್ದಾರೆ. ರಾಜು ಅವರಂತಹ ನಟ, ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯನ್ನು ಕಳೆದುಕೊಳ್ಳಲು ಆಗುವುದಿಲ್ಲ. ರಾಜು ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಬೇಕು” ಎಂದು ರಾಜು ಶ್ರೀವಾಸ್ತವ ಅವರ ಸಂಬಂಧಿ ಪ್ರಶಾಂತ್ ಮನವಿ ಮಾಡಿದ್ದಾರೆ.
“ರಾಜು ಶ್ರೀವಾಸ್ತವ ಅವರ ಮೆದುಳು ಕಾರ್ಯನಿರ್ವಹಿಸುತ್ತಿಲ್ಲ. ಅವರ ಹೃದಯಕ್ಕೆ ಎರಡು ಸ್ಟೆಂಟ್ ಅಳವಡಿಸಿದರೂ ಆರೋಗ್ಯ ಸುಧಾರಿಸುತ್ತಿಲ್ಲ. ಕಳೆದ 46 ಗಂಟೆಗಳಿಂದಲೂ ನಟ ಪ್ರಜ್ಞಾಹೀನರಾಗಿದ್ದಾರೆ. ಕಾದು ನೋಡುವುದೊಂದೇ ಮಾರ್ಗ ಎಂಬುದಾಗಿ ವೈದ್ಯರು ಹೇಳಿದ್ದಾರೆ” ಎಂಬುದಾಗಿ ಮತ್ತೊಬ್ಬ ಸಂಬಂಧಿ ತಿಳಿಸಿದ್ದಾರೆ.
ರಾಜು ಶ್ರೀವಾಸ್ತವ ಅವರು 1980ರಲ್ಲಿಯೇ ಮನರಂಜನೆ ಕ್ಷೇತ್ರ ಪ್ರವೇಶಿಸಿ ಹ್ಯಾಸನಟರಾಗಿ ಗುರುತಿಸಿಕೊಂಡಿದ್ದಾರೆ. “ಬಾಜಿಗರ್”, “ಮೈನೆ ಪ್ಯಾರ್ ಕಿಯಾ”, “ಬಾಂಬೆ ಟು ಗೋವಾ” ಸೇರಿ ಬಾಲಿವುಡ್‌ನ (Bollywood) ಹಲವು ಸಿನಿಮಾಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. 2005ರಲ್ಲಿ ಆರಂಭವಾದ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಖ್ಯಾತಿ ಗಳಿಸುವ ಜತೆಗೆ ಸ್ಟ್ಯಾಂಡಪ್ ಕಮಿಡಿಯನ್ ಆಗಿಯೂ ರೂಪುಗೊಂಡರು. ಇನ್ನು, “ಪೇಟ್ ಸಫಾ” ಜಾಹೀರಾತಂತೂ ರಾಜು ಶ್ರೀವಾಸ್ತವ ಅವರನ್ನು ಮನೆಮಾತಾಗಿಸಿದೆ.
ಇದನ್ನೂ ಓದಿ | ಹಾಡು ಮುಗಿಸಿದ ಗಾಯಕ ʼಕೆಕೆʼ, ಕೋಲ್ಕೊತಾ ಕನ್ಸರ್ಟ್ ಬಳಿಕ ಕುಸಿದು ಬಿದ್ದು ಸಾವು