ಲಖನೌ: ಭಾರತ್ ಜೋಡೋ ಯಾತ್ರೆಯ ಪಾದಯಾತ್ರೆ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ವೇಳೆ ವೀರ ಸಾವರ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಲಖನೌನ ಕೋರ್ಟ್ವೊಂದರಲ್ಲಿ ನೃಪೇಂದ್ರ ಪಾಂಡೆ ಎಂಬುವರು ದೂರು ದಾಖಲಿಸಿದ್ದಾರೆ. ‘ನೀವು ನಿಮ್ಮ ದೂರಿಗೆ ಪೂರಕವಾದ ಸಾಕ್ಷಿಯನ್ನು ನೀಡಿ. ಅದನ್ನು ಪರಾಮರ್ಶೆ ಮಾಡಿದ ನಂತರವಷ್ಟೇ ರಾಹುಲ್ ಗಾಂಧಿಗೆ ಈ ವಿಚಾರವಾಗಿ ಸಮನ್ಸ್ ನೀಡಬೇಕಾ? ಬೇಡವಾ? ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ಕೋರ್ಟ್ನ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಎ.ಕ.ಶ್ರೀವಾಸ್ತವ್ ಅವರು ದೂರುದಾರ ಪಾಂಡೆಗೆ ತಿಳಿಸಿದ್ದಾರೆ. ಹಾಗೇ, ಮುಂದಿನ ವಿಚಾರಣೆಯನ್ನು ಜನವರಿ 9ಕ್ಕೆ ನಿಗದಿಪಡಿಸಿದ್ದಾರೆ.
ವೀರ ಸಾವರ್ಕರ್ ವಿಷಯದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರು ಎಂದು ಒಪ್ಪಿಕೊಳ್ಳುತ್ತಿಲ್ಲ. ವೀರ ಸಾವರ್ಕರ್ ಅವರು ಬ್ರಿಟಿಷರ ಬಳಿ ಕ್ಷಮಾಪಣೆ ಕೇಳಿದ್ದರು ಎಂಬುದು ಆ ಪಕ್ಷದ ವಾದ. ಹಾಗೇ, ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದಾಗ ಮಾತನಾಡಿದ್ದ ರಾಹುಲ್ ಗಾಂಧಿ, ‘ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಮತ್ತು ನಾನು ನಿಮ್ಮ ವಿಧೇಯ ಸೇವಕ ಎಂದು ಉಲ್ಲೇಖಿಸಿ, ಕ್ಷಮಾಪಣೆ ಕೋರಿ ಪತ್ರ ಬರೆದಿದ್ದರು. ಅವರು ಪತ್ರದಲ್ಲಿ ಸಹಿ ಮಾಡಿರುವ ದಾಖಲೆ ನನ್ನ ಬಳಿ ಇದೆ’ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿಗರು ತಿರುಗೇಟು ಕೊಟ್ಟಿದ್ದರು. ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡ ಉದ್ಧವ್ ಠಾಕ್ರೆಯೂ ಈ ವಿಚಾರದಲ್ಲಿ ರಾಹುಲ್ ಗಾಂಧಿಗೆ ವಿರೋಧ ವ್ಯಕ್ತಪಡಿಸಿದ್ದರು. ವೀರ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಅವರು ರಾಹುಲ್ ಗಾಂಧಿ ವಿರುದ್ಧ ಮುಂಬಯಿಯ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ನೃಪೇಂದ್ರ ಪಾಂಡೆ ಲಖನೌ ಕೋರ್ಟ್ ಮೆಟ್ಟಿಲೇರಿದ್ದಾರೆ. ‘ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ಗೆ ಅಪಮಾನ ಆಗುವಂತಹ ಹೇಳಿಕೆ ನೀಡಿದ್ದಾರೆ ’ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: Rahul Gandhi | ಹಿಂದಿಯಿಂದಲ್ಲ, ಇಂಗ್ಲಿಷ್‌ನಿಂದ ಜಗತ್ತಿನೊಂದಿಗೆ ಸಂವಹನ ಸಾಧ್ಯ ಎಂದ ರಾಹುಲ್ ಗಾಂಧಿ