ಅಮೃತ್ಸರ : ಅಮೃತ್ಸರದಲ್ಲಿರುವ ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳ, ಗೋಲ್ಡನ್ ಟೆಂಪಲ್ (ಗುರುದ್ವಾರ)ಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ಕರಮಜಿತ್ ಸಿಂಗ್ ವಿರುದ್ಧ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಅವರ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಟ್ಟಿದೆ. ಇಷ್ಟಕ್ಕೆಲ್ಲ ಕಾರಣ ಕರಮಜಿತ್ ಸಿಂಗ್ ಧರಿಸಿದ್ದ ಟೀ ಶರ್ಟ್. ಅದು ಒಂದು ಸಾದಾ ಟಿ ಶರ್ಟ್ ಆಗಿದ್ದರೆ ಪರವಾಗಿರಲಿಲ್ಲ, ಅದರ ಮೇಲೆ ಇರುವ ಒಂದು ಚಿತ್ರವನ್ನು ನೋಡಿ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಕೆರಳಿದೆ.
ಕರಮಜಿತ್ ಸಿಂಗ್ ಗೋಲ್ಡನ್ ಟೆಂಪಲ್ಗೆ ಭೇಟಿ ಕೊಟ್ಟು, ಅದರ ಎದುರು ನಿಂತು ಒಂದು ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಕರಮಜಿತ್ ಸಿಂಗ್ ಧರಿಸಿರುವ ಟಿ ಶರ್ಟ್ ಮೇಲೆ ಜಗದೀಶ್ ಟೈಟ್ಲರ್ ಫೋಟೋ ಇರುವುದೇ ಶಿರೋಮಣಿ ಗುರುದ್ವಾರ ಪರಿಬಂಧಕ್ ಸಮಿತಿಯ ಆಕ್ರೋಶಕ್ಕೆ ಕಾರಣ. ಜಗದೀಶ್ ಟೈಟ್ಲರ್ ಕಾಂಗ್ರೆಸ್ನ ರಾಜಕಾರಣಿ. 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ಇವರೊಬ್ಬ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಆದರೆ ಜಗದೀಶ್ ಟೈಟ್ಲರ್ ತಮ್ಮ ಮೇಲಿನ ಆರೋಪವನ್ನು ಅಂದಿನಿಂದಲೂ ತಳ್ಳಿ ಹಾಕಿಕೊಂಡೇ ಬಂದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಅಂಗರಕ್ಷಕರೇ (ಸಿಖ್ಖರು) ಹತ್ಯೆ ಮಾಡಿದ್ದರು. ಇದೇ ಸೇಡಿಗಾಗಿ 1984ರಲ್ಲಿ ಸಿಖ್ ಹತ್ಯಾಕಾಂಡ ನಡೆದಿತ್ತು. ಅದರ ರೂವಾರಿಗಳ ಸಾಲಿನಲ್ಲಿ ಜಗದೀಶ್ ಟೈಟ್ಲರ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಹಾಗಂತ ಅದೇನೂ ಅವರ ರಾಜಕೀಯ ಜೀವನಕ್ಕೆ ತೊಂದರೆ ತಂದೊಡ್ಡಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಚಿವ ಸ್ಥಾನವನ್ನೂ ಅವರು ಪಡೆದಿದ್ದಾರೆ.
ಸಿಖ್ಖರ ಮಾರಣಹೋಮದಲ್ಲಿ ಜಗದೀಶ್ ಟೈಟ್ಲರ್ ಪಾತ್ರವಿದೆ. ಅಂಥವರ ಭಾವಚಿತ್ರ ಇರುವ ಟಿ ಶರ್ಟ್ ಧರಿಸಿಯೇ ಕರಮಜಿತ್ ಸಿಂಗ್ ಗುರುದ್ವಾರಕ್ಕೆ ಬರುತ್ತಾರೆ. ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಮಿ ಹೇಳಿದ್ದಾರೆ. ‘ಕಾಂಗ್ರೆಸ್ ಯಾವಾಗಲೂ ಸಿಖ್ ವಿರೋಧಿ. ಇದೀಗ ಮತ್ತೆ ಕಾಂಗ್ರೆಸ್ ಕಾರ್ಯಕರ್ತ ನಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮೊಹಾಲಿ ಗುಪ್ತಚರ ದಳ ಪ್ರಧಾನ ಕಚೇರಿ ದಾಳಿ ಹಿಂದೆ ಸಿಖ್ ಫಾರ್ ಜಸ್ಟೀಸ್; 20 ಮಂದಿ ಬಂಧನ