Site icon Vistara News

ಧಾರ್ಮಿಕ ಭಾವನೆಗಳಿಗೆ ಧಕ್ಕೆ, ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್‌ ವಿರುದ್ಧ ದೂರು ದಾಖಲು

raja singh

ಹೈದರಾಬಾದ್‌ : ನಿರ್ದಿಷ್ಟ ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್‌ ವಿರುದ್ಧ ಹೈದಾರಬಾದ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೆಲಂಗಾಣದ ಗೋಶಾಲಮಹಲ್‌ನ ಶಾಸಕರಾದ ರಾಜಾ ಸಿಂಗ್‌, ರಾಜಸ್ಥಾನದ ಅಜ್ಮೇರ್‌ ಷರೀಫ್‌ ದರ್ಗಾ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನಲೆ ಹೈದರಾಬಾದ್‌ ನಿವಾಸಿಯಾದ ಉದ್ಯಮಿ ಮೊಹಮ್ಮದ್‌ ಆಲಿ ರಾಜಾ ಸಿಂಗ್‌ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ರಾಜಾ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ 295 ಎ ಅಡಿಯಲ್ಲಿ ಕಾಂಚನ್‌ ಬಾಗ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನು ಓದಿ| ಪ್ರವಾದಿ ಮೊಹಮ್ಮದ್‌ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್‌ ಶರ್ಮಾ ಬಿಜೆಪಿಯಿಂದ ಅಮಾನತು

ಈ ಬಗ್ಗೆ ಕಂಚನ್‌ಬಾಗ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಪಿ ಉಮಾ ಮಹೇಶ್ವರ್‌ ರಾವ್‌ ಪ್ರತಿಕ್ರಿಯಿಸಿದ್ದು, ನಾವು ಬಿಜೆಪಿ ಶಾಸಕ ರಾಜಾ ಸಿಂಗ್‌ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಕಾಂಚನ್‌ಬಾಗ್‌ನ ನಿವಾಸಿ ಮೊಹಮ್ಮದ್‌ ಆಲಿ ಎಂಬ ವ್ಯಕ್ತಿ ರಾಜಾ ಸಿಂಗ್‌ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ್ದಾರೆ. ಬಿಜೆಪಿ ಶಾಸಕ ರಾಜಾ ಸಿಂಗ್‌ ರವರು ಸಮುದಾಯದ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ವಿಡಿಯೋ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಕೂಡ ಆಗಿದೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರವಾದಿ ಮೊಹಮ್ಮದ್‌ ಬಗ್ಗೆ ನೂಪುರ್‌ ಶರ್ಮಾ ರವರು ನೀಡಿರುವ ಹೇಳಿಕೆಗೆ ಈಗಾಗಲೇ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ತೆಲಂಗಾಣದ ಬಿಜೆಪಿ ಶಾಸಕ ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.‌

ಇದನ್ನು ಓದಿ| ನೂಪುರ್‌ ಶರ್ಮಾಗೆ ನೆದರ್‌ಲ್ಯಾಂಡ್‌ ಸಂಸದನ ಬೆಂಬಲ; ಭಾರತೀಯರು ಒಗ್ಗಟ್ಟಾಗಲು ಕರೆ

Exit mobile version