ನವದೆಹಲಿ: ಕಾಂಗ್ರೆಸ್ನ ಬಹು ನಿರೀಕ್ಷಿತ ಭಾರತ್ ಜೋಡೋ ಯಾತ್ರೆ (Bharat Jodo Yatra)ಗೆ ಇಂದು ರಾಹುಲ್ ಗಾಂಧಿ ಚಾಲನೆ ನೀಡಿದರು. ಕನ್ಯಾಕುಮಾರಿಯ ಗಾಂಧಿ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರ ಹಲವು ಪ್ರಮುಖ ನಾಯಕರು ಇದ್ದರು. ಭಾರತ್ ಜೋಡೋ ಯಾತ್ರೆಗೆ ಚಾಲನೆ ವೇಳೆ ಇಂದು ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಷ್ಟ್ರಧ್ವಜವನ್ನು ರಾಹುಲ್ ಗಾಂಧಿಯವರಿಗೆ ನೀಡಿದರು. ಬಳಿಕ ಇವರಿಬ್ಬರೂ ನಾಯಕರು ತ್ರಿವರ್ಣ ಧ್ವಜಕ್ಕೆ ನಮಿಸಿದರು.
ಇಂದು ಬೆಳಗ್ಗೆ ರಾಹುಲ್ ಗಾಂಧಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ರಾಜೀವ್ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ, ನಮಿಸಿದರು. ಅದಾದ ಬಳಿಕ ಕನ್ಯಾಕುಮಾರಿಗೆ ಹೋಗಿ ಅಲ್ಲಿನ ವಿವೇಕಾನಂದ ಮೆಮೋರಿಯಲ್ಗೆ ಭೇಟಿ ನೀಡಿದ್ದರು. ಇಂದು ಯಾತ್ರೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ನಾಳೆ (ಸೆಪ್ಟೆಂಬರ್ 8) ಮುಂಜಾನೆಯಿಂದ ಕಾಂಗ್ರೆಸ್ ನಾಯಕರ ಕಾಲ್ನಡಿಗೆ ಪ್ರಾರಂಭವಾಗಲಿದೆ.
ಕನ್ಯಾಕುಮಾರಿಯಿಂದ ಹೊರಡಲಿರುವ ಭಾರತ್ ಜೋಡೋ ಯಾತ್ರೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ, 20 ಪ್ರಮುಖ ಪ್ರದೇಶಗಳಲ್ಲಿ ಹಾದು ಹೋಗಲಿದೆ. ಅದರಲ್ಲಿ ಕರ್ನಾಟಕದ ಮೈಸೂರು, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿಗೂ ಜೋಡೋ ಯಾತ್ರೆ ಪ್ರವೇಶ ಮಾಡಲಿದೆ. ಅದರ ಹೊರತಾಗಿ ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ವಿಕಾರಾಬಾದ್, ನಂದೇಡ್, ಜಲಗಾಂವ್, ಜಾಮೋದ್, ಇಂಧೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್, ಜಮ್ಮು, ಶ್ರೀನಗರ ಮೂಲಕ ಕಾಶ್ಮೀರ ತಲುಪಲಿದೆ. ಐದು ತಿಂಗಳಲ್ಲಿ ಈ ಎಲ್ಲ ಪ್ರದೇಶಗಳಲ್ಲಿ ಯಾತ್ರೆ ಸುತ್ತಲಿದೆ.
ಇದನ್ನೂ ಓದಿ: Bharat Jodo Yatra | ಪೋಸ್ಟರ್ನಲ್ಲಿ ಕಂಡುಬಂತು ರಾಬರ್ಟ್ ವಾದ್ರಾ ಫೋಟೋ; ಬಿಜೆಪಿಯಿಂದ ಟೀಕೆ