ನವ ದೆಹಲಿ: ಸದ್ಯದ ಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳಿಗೂ 2024 ರ ಲೋಕಸಭೆ ಚುನಾವಣೆಯೇ ಟಾರ್ಗೆಟ್. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪಕ್ಷಕ್ಕಂತೂ ತಳಮಟ್ಟದಿಂದ ಸಂಘಟಿತವಾಗುವ, ಕಾರ್ಯಕರ್ತರನ್ನು ಒಗ್ಗೂಡಿಸುವ, ದೇಶದ ಜನರಲ್ಲಿ ನಂಬಿಕೆ ಹುಟ್ಟಿಸಿಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ ಅದು ಒಂದಲ್ಲ ಒಂದು ಕಸರತ್ತು ನಡೆಸುತ್ತಲೇ ಇದೆ. ಅದರ ಒಂದು ಭಾಗವಾಗಿ ಇಂದಿನಿಂದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ನಡೆಯಲಿದೆ. ಕನ್ಯಾಕುಮಾರಿಯಿಂದ ಇಂದು ಸಂಜೆ 5 ಗಂಟೆಯಿಂದ ಪ್ರಾರಂಭವಾಗಲಿದೆ.
ರಾಹುಲ್ ಗಾಂಧಿ ಈಗಾಗಲೇ ತಮಿಳುನಾಡಿಗೆ ತೆರಳಿದ್ದು ಇಂದು ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸ್ಮಾರಕಕ್ಕೆ ಭೇಟಿ ಕೊಟ್ಟು ಗೌರವ ಸಲ್ಲಿಸಿದ್ದಾರೆ. ಅಲ್ಲಿಂದ ಕನ್ಯಕುಮಾರಿಗೆ ತೆರಳಲಿದ್ದಾರೆ. ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಉದ್ಘಾಟನೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ, ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರಾಷ್ಟ್ರಧ್ವಜ ಹಸ್ತಾಂತರ ಮಾಡುವರು. ಗುರುವಾರ ( ಸೆ.8) ಮುಂಜಾನೆಯಿಂದ ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಕಾಲ್ನಡಿಗೆ ಶುರು ಮಾಡಲಿದ್ದಾರೆ.
3500 ಕಿಮೀ ದೂರದ ಪಾದಯಾತ್ರೆ ಇದಾಗಿದ್ದು, ಕಳೆದೊಂದು ಶತಮಾನದಲ್ಲೇ ದೇಶದಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ಇಷ್ಟು ಬೃಹತ್ ಮಟ್ಟದ ‘ರಾಜಕೀಯ ಮೆರವಣಿಗೆ’ ನಡೆಸಿರಲಿಲ್ಲ ಎನ್ನಲಾಗಿದೆ. ಈ ಭಾರತ್ ಜೋಡೋ ಯಾತ್ರೆಯಡಿ ಕಾಂಗ್ರೆಸ್ ನಾಯಕರು ಪ್ರತಿದಿನ ಆರರಿಂದ ಏಳು ತಾಸು ಪಾದಯಾತ್ರೆ ನಡೆಸಿ, 150 ದಿನಗಳಲ್ಲಿ 12 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿಕೊಡಲಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಈ ಯಾತ್ರೆ ಅಂತ್ಯವಾಗಲಿದೆ.
ರಾತ್ರಿ ಎಲ್ಲಿ ತಂಗುತ್ತಾರೆ?
ಈ 150 ದಿನಗಳಲ್ಲಿ ಕಾಂಗ್ರೆಸ್ ನಾಯಕರು ರಾತ್ರಿ ಕಳೆಯಲು ಯಾವುದೇ ಹೋಟೆಲ್ಗಳಲ್ಲಿ ತಂಗುವುದಿಲ್ಲ. ಇವರಿಗೆ ರಾತ್ರಿ ಉಳಿದುಕೊಳ್ಳಲೆಂದೇ ಕಂಟೇನರ್ಗಳ ವ್ಯವಸ್ಥೆ ಮಾಡಿಡಲಾಗಿದೆ. ಒಟ್ಟು 60 ಕಂಟೇನರ್ಗಳು ಸಜ್ಜಾಗಿವೆ. ಅದರಲ್ಲಿ ಬೆಡ್ಗಳು, ಟಾಯ್ಲೆಟ್ಗಳು, ಎಸಿ ಎಲ್ಲವನ್ನೂ ಅಳವಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ರಾಹುಲ್ ಗಾಂಧಿಗೆಂದೇ ಒಂದು ಪ್ರತ್ಯೇಕ ಕಂಟೇನರ್ ಇಡಲಾಗಿದ್ದು, ಉಳಿದ 59ನ್ನು ಹಲವರು ಸೇರಿ ಹಂಚಿಕೊಳ್ಳುವರು. ಕಾಂಗ್ರೆಸ್ ಯಾತ್ರಿಗಳು ಹೋದ ಊರಿನಲ್ಲಿಯೇ, ಒಂದು ಹಳ್ಳಿಯ ಸಮೀಪ ಕಂಟೇನರ್ ಪಾರ್ಕ್ ಮಾಡಲಾಗುತ್ತದೆ. ಯಾತ್ರೆಯಲ್ಲಿ ಪೂರ್ಣಾವಧಿ ಪಾಲ್ಗೊಳ್ಳುವವರೆಲ್ಲ ರಸ್ತೆಯ ಮೇಲೇ ಊಟ-ತಿಂಡಿ ಮಾಡಲಿದ್ದಾರೆ. ಒಟ್ಟೂ ಐದು ತಿಂಗಳು ಈ ಯಾತ್ರೆ ನಡೆಯುತ್ತದೆ. ಈ ಐದು ತಿಂಗಳಲ್ಲಿ ಹವಾಮಾನ ಕೂಡ ಬದಲಾವಣೆಯಾಗಲಿದ್ದು, ಅದೆಲ್ಲದರ ದೃಷ್ಟಿಯಿಂದ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: Bangalore Rain | ಜನರ ಸಂಕಷ್ಟದ ಹೊಳೆಯಲ್ಲಿ ಟ್ಯೂಬ್‌ನಲ್ಲಿ ಕುಳಿತು ಪ್ರತಿಭಟಿಸಿದ ಕಾಂಗ್ರೆಸ್ ಯುವ ನಾಯಕ