ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಸನ್ನದ್ಧವಾಗಿದೆ. ಸದ್ಯ 159 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಂತಿಮವಾಗಿ ಎಷ್ಟು ಸೀಟ್ ಗೆಲ್ಲಲಿದೆ ಎಂಬುದು ಮತ ಎಣಿಕೆ ನಂತರ ಸ್ಪಷ್ಟವಾಗಲಿದೆ. ಹೀಗೆ ಬಿಜೆಪಿ ಗೆಲುವಿನ ಓಟದಲ್ಲಿರುವ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ತಮ್ಮ ಕುತ್ತಿಗೆಗೆ ಶಾಲನ್ನು ನೇಣಿನಂತೆ ಬಿಗಿದುಕೊಂಡು, ಹತಾಶೆ-ಕೋಪದಿಂದ ರೌದ್ರಾವತಾರ ತಾಳಿದ ಘಟನೆ ನಡೆದಿದೆ. ಗಾಂಧಿಧಾಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರತ್ಭಾಯ್ ವೆಲ್ಜಿಭಾಯ್ ಸೋಲಂಕಿ ಅವರು ಕುತ್ತಿಗೆಗೆ ನೇಣಿನ ಕುಣಿಕೆ ಬಿಗಿದುಕೊಂಡು, ಇವಿಎಂ ಸರಿಯಿಲ್ಲ ಎಂದು ಆರೋಪ ಮಾಡುತ್ತ ಹೈಡ್ರಾಮಾವನ್ನೇ ಮಾಡಿದ್ದಾರೆ.
ಸೋಲಂಕಿ ಅವರು ಗಾಂಧಿಧಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲ್ತಿ ಕಿಶೋರ್ ಮಹೇಶ್ವರಿ ಅವರಿಗಿಂತಲೂ 12 ಸಾವಿರ ಮತಗಳ ಹಿನ್ನಡೆಯಲ್ಲಿದ್ದಾಗ ಅತಿಯಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು ಹೊದ್ದಿದ್ದ ಶಾಲನ್ನೇ ಕುತ್ತಿಗೆಗೆ ನೇಣಿನ ಮಾದರಿಯಲ್ಲಿ ಬಿಗಿದುಕೊಂಡು, ‘ಇದೆಲ್ಲದಕ್ಕೂ ಇವಿಎಂ ಕಾರಣ. ಹಲವು ಇವಿಎಂ ಯಂತ್ರಗಳನ್ನು ಸರಿಯಾಗಿ ಸೀಲ್ ಮಾಡಿರಲಿಲ್ಲ’ ಎಂದು ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಇವಿಎಂ ದೋಷದ ವಿರುದ್ಧ ಧರಣಿಯನ್ನೂ ಕುಳಿತಿದ್ದರು. ಅವರು ಅತಿಯಾಗಿ ಹತಾಶೆಗೆ ಒಳಗಾದ ಮುಖಭಾವ ಹೊತ್ತಿದ್ದರು. ಮತ ಎಣಿಕೆ ಕೇಂದ್ರದ ಬಳಿಯೇ ಅವರು ಇಷ್ಟೆಲ್ಲ ರಾದ್ಧಾಂತ ಸೃಷ್ಟಿಸಿದ್ದರು. ಬಳಿಕ ಜತೆಗಿದ್ದವರು ಸೋಲಂಕಿಯವರನ್ನು ಸಮಾಧಾನ ಪಡಿಸಿದ್ದಾರೆ.
ಇದನ್ನೂ ಓದಿ: Gujarat Election Result | ಇಂದು ಗುಜರಾತ್ ಚುನಾವಣೆ ಫಲಿತಾಂಶ, ಯಾರಿಗೆ ಗೆಲುವಿನ ಸಂತೋಷ?