ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ವಿಚಾರಣೆ ಎದುರಿಸಲು ಸೋನಿಯಾ ಗಾಂಧಿ ಇ ಡಿ ಕಚೇರಿಗೆ ತೆರಳಿದ್ದಾರೆ. ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಇಂದು ದೆಹಲಿಯ ರಸ್ತೆಗಳಲ್ಲಿ, ಎಐಸಿಸಿ ಪ್ರಧಾನ ಕಚೇರಿ ಎದುರು ಮತ್ತು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ . ಸೋನಿಯಾ ಗಾಂಧಿಯವರಿಗೆ ಬೆಂಬಲ ಸೂಚಿಸುವ ಘೋಷಣೆಗಳನ್ನು ಕೂಗಿ, ಇಡಿ ಮತ್ತು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆಗೆ ಒಳಪಡಿಸಿದಾಗಲೂ ಕಾಂಗ್ರೆಸ್ಸಿಗರು ದೇಶಾದ್ಯಂತ ತೀವ್ರ ಹೋರಾಟ ನಡೆಸಿದ್ದರು.
ಹೇಗೆ ನಡೆಯಲಿದೆ ವಿಚಾರಣೆ?
ಸೋನಿಯಾ ಗಾಂಧಿಯವರ ಆರೋಗ್ಯವನ್ನು ಪರಿಗಣಿಸಿ ಇ.ಡಿ. ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆ. ರಾಹುಲ್ ಗಾಂಧಿಯವರಂತೆ ಸೋನಿಯಾ ಗಾಂಧಿಯನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಇ.ಡಿ.ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕೊವಿಡ್ 19 ನಿಂದ ಚೇತರಿಸಿಕೊಂಡಿರುವ ಅವರ ಜತೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇ.ಡಿ. ಕಚೇರಿಗೆ ಹೋಗಿದ್ದಾರೆ. ಅವರು ತಾಯಿಯ ವಿಚಾರಣೆ ಮುಗಿಯುವವರೆಗೂ ಮತ್ತೊಂದು ಕೋಣೆಯಲ್ಲಿ ಕಾಯಲಿದ್ದಾರೆ. ಹಾಗೇ, ಇನ್ನೊಬ್ಬ ವೈದ್ಯರೂ ಕೂಡ ಇರಲಿದ್ದಾರೆ. ಸೋನಿಯಾ ಗಾಂಧಿ ಅಸ್ವಸ್ಥರಾದರೆ ಅವರಿಗೆ ತಕ್ಷಣವೇ ಚಿಕಿತ್ಸೆ ಕೊಡಲು ಈ ವ್ಯವಸ್ಥೆ ಮಾಡಲಾಗಿದೆ. ಜಾರಿ ನಿರ್ದೇಶನಲಾಯದ ಅಸಿಸ್ಟೆಂಟ್ ಡೈರೆಕ್ಟರ್ ಡಾ. ಮೋನಿಕಾ ಶರ್ಮಾ ನೇತೃತ್ವದ ಐವರು ಅಧಿಕಾರಿಗಳ ತಂಡ ಸೋನಿಯಾ ಗಾಂಧಿ ವಿಚಾರಣೆ ನಡೆಸಲಿದೆ. ಹಾಗೇ, ಸೋನಿಯಾ ಗಾಂಧಿ ತುಂಬ ಬಳಲಿದರೆ ಅವರನ್ನು ವಾಪಸ್ ಕಳಿಸಲಾಗುವುದು ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ
ಇಂದು ಬೆಳಗ್ಗೆಯಿಂದಲೂ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು-ಪ್ರಮುಖರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿಯನ್ನು ಇ.ಡಿ. ವಿಚಾರಣೆಗೆ ಒಳಪಡಿಸಬಾರದು ಎಂದು ಆಗ್ರಹಿಸಿ ದೆಹಲಿಯ ಎಐಸಿಸಿ ಕಚೇರಿ ಎದುರು, ಸಂಸತ್ತಿನಲ್ಲಿ ಪ್ರತಿಭಟಿಸಿದ್ದಾರೆ. ಇಂದು ಬೆಳಗ್ಗೆ ಮೊದಲು ಎಐಸಿಸಿ ಕಚೇರಿ ಎದುರು ಸೇರಿದ ಕಾಂಗ್ರೆಸ್ ನಾಯಕರು ಅಲ್ಲಿಯೇ ಕುಳಿತು ಕೇಂದ್ರ ಸರ್ಕಾರ, ಇ.ಡಿ. ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಗೇ, ಮುಂಗಾರು ಅಧಿವೇಶನ ನಡೆಯುತ್ತಿರುವ ಸಂಸತ್ತಿನಲ್ಲೂ ಪ್ರತಿಭಟನೆ ನಡೆಸಿದರು. ಸಂಸತ್ತಿನ ಹೊರಗೆ ಕಾಂಗ್ರೆಸ್ ಸಂಸದರು ದೊಡ್ಡದೊಡ್ಡ ಬ್ಯಾನರ್ ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ʼಇಡಿ ದುರ್ಬಳಕೆ ನಿಲ್ಲಲಿʼ ಎಂದು ಆಗ್ರಹಿಸಿದರು. ದೆಹಲಿಯಲ್ಲಷ್ಟೇ ಅಲ್ಲ, ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಹೋರಾಟ ನಡೆಯುತ್ತಿದೆ.
ಇದನ್ನೂ ಓದಿ: National Herald Case | ಇಂದು ಸೋನಿಯಾ ಗಾಂಧಿ ವಿಚಾರಣೆ, ನಡೆಯಲಿದೆ ದೇಶಾದ್ಯಂತ ಪ್ರತಿಭಟನೆ