ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ವಿಚಾರಣೆ ಎದುರಿಸಲು ಸೋನಿಯಾ ಗಾಂಧಿ ಇಂದು ಇ ಡಿ ಕಚೇರಿಗೆ ತೆರಳಿದ್ದಾರೆ. ಜುಲೈ 21ಕ್ಕೆ ವಿಚಾರಣೆ ಎದುರಿಸಿದ್ದ ಸೋನಿಯಾ ಗಾಂಧಿಗೆ ಜುಲೈ 25ಕ್ಕೆ ಮತ್ತೆ ಬರುವಂತೆ ಇ ಡಿ ಅಧಿಕಾರಿಗಳು ಹೇಳಿದ್ದರು. ಆದರೆ ನಂತರ ಜುಲೈ 26ಕ್ಕೆ ಮುಂದೂಡಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಸೋನಿಯಾ ಗಾಂಧಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಜತೆಗೆ ಇ ಡಿ ಕಚೇರಿಗೆ ಹೋಗಿದ್ದಾರೆ. ರಾಹುಲ್ ಗಾಂಧಿ ಅಲ್ಲಿಂದ ವಾಪಸ್ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ, ಪ್ರಿಯಾಂಕಾ ಗಾಂಧಿ ತಾಯಿಯ ವಿಚಾರಣೆ ಮುಗಿಯುವವರೆಗೂ ಇನ್ನೊಂದು ಕೋಣೆಯಲ್ಲಿಯೇ ಕುಳಿತಿರಲಿದ್ದಾರೆ.
ನಾಯಕಿ ಸೋನಿಯಾ ಗಾಂಧಿ ವಿಚಾರಣೆಯನ್ನು ವಿರೋಧಿಸಿ ಇಂದು ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ನಾಯಕರು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರು ಅನುಮತಿ ಕೊಟ್ಟಿಲ್ಲ. ಸದ್ಯ ರಾಜ್‌ಘಾಟ್‌ನಲ್ಲಿ ಸೆಕ್ಷನ್ 144 ಜಾರಿಯಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆಯ ಎದುರಿನಿಂದ ವಿಜಯ್ ಚೌಕ್‌ದೆಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದಾರೆ. ದೊಡ್ಡ ಬ್ಯಾನರ್‌ಗಳನ್ನು, ಘೋಷಣಾ ಫಲಕಗಳನ್ನು ಹಿಡಿದು ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಕೂಡ ಪಾಲ್ಗೊಂಡಿದ್ದಾರೆ.
ರಾಜ್‌ಘಾಟ್‌ನಲ್ಲಿ ಮೌನ ಪ್ರತಿಭಟನೆ ನಡೆಸಲು ಅವಕಾಶ ಕೊಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಜಯ್ ಮಾಕೆನ್, “ನಾವು ಸತ್ಯಾಗ್ರಹ ನಡೆಸಲು ಸರ್ಕಾರ ಅನುಮತಿ ನೀಡದೆ ಇರುವುದು ದುರದೃಷ್ಟ. ಸೈದ್ಧಾಂತಿಕ ನೆಲೆಗಟ್ಟಿನ ಪ್ರತಿಪಕ್ಷಕ್ಕೆ ಒಂದು ಸತ್ಯಾಗ್ರಹ ನಡೆಸಲೂ ಅವಕಾಶ ಕೊಡದೆ ಇರುವುದು ಪ್ರಜಾಪ್ರಭುತ್ವವನ್ನೇ ಕೊಂದಂತೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿ ಉಳಿದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇ ಡಿ ವಿಚಾರಣೆ ಇಂದು; ರಾಜ್ ಘಾಟ್‌ನಲ್ಲಿ ಸೆಕ್ಷನ್ 144 ಜಾರಿ