ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ(Sonia Gandhi)ಯನ್ನು ಇಂದು ಜಾರಿ ನಿರ್ದೇಶನಾಲಯ ಎರಡನೇ ಸುತ್ತಿನ ವಿಚಾರಣೆಗೆ ಒಳಪಡಿಸಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಮೌನ ಪ್ರತಿಭಟನೆ ನಡೆಸಲಿದೆ. ಅದರಲ್ಲೂ ಕಾಂಗ್ರೆಸ್ ನಾಯಕರು ರಾಜ್‌ಘಾಟ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿ ಪೊಲೀಸರ ಬಳಿ ಅನುಮತಿಯನ್ನೂ ಕೇಳಿದ್ದರು. ಆದರೆ ಪೊಲೀಸರು ಅನುಮತಿಯನ್ನು ನಿರಾಕರಿಸುವ ಜತೆ, ಇಂದು ರಾಜ್‌ಘಾಟ್‌ನಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ.
ಜುಲೈ 21ರಂದು ಸೋನಿಯಾ ಗಾಂಧಿಯವರನ್ನು ಇ ಡಿ ಅಧಿಕಾರಿಗಳು ಮೊದಲ ಹಂತದ ವಿಚಾರಣೆಗೆ ಒಳಪಡಿಸಿದ್ದರು. ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ ಕೇವಲ 3 ತಾಸುಗಳ ಕಾಲ ಅವರ ವಿಚಾರಣೆ ನಡೆಸಲಾಗಿತ್ತು. ಅಂದು ಕೂಡ ರಾಷ್ಟ್ರಾದ್ಯಂತ ಕಾಂಗ್ರೆಸ್ಸಿಗರ ಪ್ರತಿಭಟನೆ ನಡೆದಿತ್ತು. ಪಿ.ಚಿದಂಬರಂ, ಸಚಿನ್ ಪೈಲಟ್ ಸೇರಿ ಹಲವು ನಾಯಕರನ್ನು ಅಂದು ಪೊಲೀಸರು ವಶಕ್ಕೆ ಪಡೆದಿದ್ದರು. ಹಾಗೇ, ಬೆಂಗಳೂರು ಮತ್ತು ಇತರ ಕೆಲವು ನಗರಗಳಲ್ಲಿ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಳೆದಿತ್ತು. ಈ ಬಾರಿ ಮೌನವಾಗಿಯೇ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಂಗ್ರೆಸ್ ಹೇಳಿದ್ದರೂ ಪೊಲೀಸರು ಅನುಮತಿ ಕೊಟ್ಟಿಲ್ಲ.
ಶಾಂತಿಯುತ ಪ್ರತಿಭಟನೆ ನಡೆಸಲು ಒಪ್ಪಿಗೆ ಕೊಡದೆ ಇದ್ದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್, ʼನಾವು ರಾಜ್‌ಘಾಟ್‌ನಲ್ಲಿ ಮೌನ ಪ್ರತಿಭಟನೆ ನಡೆಸಲು ಇಚ್ಛಿಸಿದ್ದೆವು. ಆದರೆ ಅನುಮತಿ ನೀಡದೆ ಇರುವುದು ದುರದೃಷ್ಟಕರ ಮತ್ತು ಖಂಡನೀಯ. ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಧ್ವನಿಯನ್ನೇ ಹತ್ತಿಕ್ಕುತ್ತಿದೆʼ ಎಂದು ಆರೋಪಿಸಿದ್ದಾರೆ.
ದಶಕಗಳ ಕಾಲದಿಂದ ಕಾಂಗ್ರೆಸ್ ಬೆನ್ನತ್ತಿರುವ ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಈಗಾಗಲೇ ರಾಹುಲ್ ಗಾಂಧಿಯನ್ನು 5 ಸುತ್ತುಗಳ ವಿಚಾರಣೆ ನಡೆಸಿರುವ ಇ.ಡಿ. ಇದೀಗ ಸೋನಿಯಾ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಜುಲೈ 21ರಂದು ನಡೆದ ಸೋನಿಯಾ ಗಾಂಧಿಯವರೊಂದಿಗೆ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಕೂಡ ಹೋಗಿದ್ದರು. ಹಾಗೇ, ಸೋನಿಯಾ ಅಸ್ವಸ್ಥರಾದರೆ ನೆರವಿಗೆ ಬೇಕಾಗುತ್ತದೆ ಎಂದು ಒಬ್ಬರು ವೈದ್ಯಕೀಯ ಸಹಾಯಕರೊಬ್ಬರು ಇ ಡಿ ಕಚೇರಿಯಲ್ಲಿದ್ದರು. ಅಂದು ಕೇವಲ 3 ತಾಸುಗಳಲ್ಲಿ ಸೋನಿಯಾ ಗಾಂಧಿಗೆ 28 ಪ್ರಶ್ನೆ ಗಳನ್ನು ಕೇಳಲಾಗಿದೆ. ಮೊದಲು ಜುಲೈ 25ಕ್ಕೆ ಹಾಜರಾಗುವಂತೆ ಹೇಳಲಾಗಿತ್ತು. ಆದರೆ ನಂತರ 26ಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ: ಸೋನಿಯಾ ಗಾಂಧಿ ಇ ಡಿ ವಿಚಾರಣೆ ಮುಕ್ತಾಯ; ಜು.25ಕ್ಕೆ ಮತ್ತೆ ಹಾಜರಾಗಲು ಸೂಚನೆ