ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ನೀಡಿದ ಹೇಳಿಕೆಯನ್ನೇ ಗುರಾಣಿಯಾಗಿ ಬಳಸಿಕೊಂಡಿರುವ ಕಾಂಗ್ರೆಸ್, ಮೋದಿ ಅವರಿಗೆ ಟಾಂಗ್ ನೀಡಿದೆ. “ಕೇಂದ್ರದ ವಿರುದ್ಧ ಟೀಕಿಸದಿದ್ದರೆ ನನ್ನನ್ನೇ ಉಪ ರಾಷ್ಟ್ರಪತಿಯನ್ನಾಗಿ ಮಾಡಲಾಗುತ್ತಿತ್ತು” ಎಂದು ಸತ್ಯಪಾಲ್ ಮಲಿಕ್ ಹೇಳಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್, “ಇವೆಲ್ಲ ಮೋದಿ ಸರ್ಕಾರದ ಉಚಿತ ಕೊಡುಗೆಗಳು (Revdi Culture)” ಎಂದು ತಿರುಗೇಟು ನೀಡಿದೆ.
ಇತ್ತೀಚೆಗೆ ಉಚಿತ ಕೊಡುಗೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಉಚಿತ ಕೊಡುಗೆಗಳನ್ನು ವಿರೋಧಿಸಿದ್ದರು. ಈಗ ಇದನ್ನೇ ಕಾಂಗ್ರೆಸ್ ಅಸ್ತ್ರವನ್ನಾಗಿಸಿಕೊಂಡಿದೆ. “ಇದು ಮೋದಿ ಅವರ ಉಚಿತ ಕೊಡುಗೆ: ಸರ್ಕಾರದ ವಿರುದ್ಧ ಮಾತನಾಡದಿರಿ ಹಾಗೂ ಉಪ ರಾಷ್ಟ್ರಪತಿ ಹುದ್ದೆ ಪಡೆಯಿರಿ ಎಂಬುದು ಅವರ ಉಚಿತ ಕೊಡುಗೆ ವ್ಯಾಪ್ತಿಗೆ ಬರುತ್ತದೆ” ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಸತ್ಯಪಾಲ್ ಮಲಿಕ್ ಅವರು ಕೆಲ ವರ್ಷಗಳಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ರಾಜಪಥವನ್ನು ಕರ್ತವ್ಯ ಪಥ ಎಂದು ನಾಮಕರಣ ಮಾಡಿದ್ದನ್ನೂ ಮಲಿಕ್ ಟೀಕಿಸಿದ್ದರು. ಅಲ್ಲದೆ, ಅವರು “ನಾನು ಕೇಂದ್ರವನ್ನು ಟೀಕಿಸದಿದ್ದರೆ ಉಪ ರಾಷ್ಟ್ರಪತಿ ಆಗುತ್ತಿದ್ದೆ” ಎಂದಿದ್ದರು. ಈಗ ಇದೇ ಪ್ರತಿಪಕ್ಷದ ಅಸ್ತ್ರವಾಗಿದೆ.
ಇದನ್ನೂ ಓದಿ | ರೈತರಿಗೆ ಬೆಂಬಲ ಬೆಲೆ ಜಾರಿ ಮಾಡದಿರಲು ಮೋದಿ ಫ್ರೆಂಡ್ ಅದಾನಿ ಕಾರಣ ಎಂದ ಸತ್ಯಪಾಲ್ ಮಲಿಕ್