ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (Srinivas BV) ಮತ್ತು ಉಸ್ತುವಾರಿ ಕಾರ್ಯದರ್ಶಿ ವರ್ಧನ್ ಯಾದವ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಅಸ್ಸಾಂ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ (Angkita Dutta) ಅವರನ್ನು ಕಾಂಗ್ರೆಸ್ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕೆ ಉಚ್ಚಾಟಿಸಿದ್ದಾಗಿ ಕಾಂಗ್ರೆಸ್ ತಿಳಿಸಿದೆ. ‘ಕಾಂಗ್ರೆಸ್ನಲ್ಲಿ ಇದ್ದುಕೊಂಡು ಪಕ್ಷ ವಿರೋಧಿ ಕೆಲಸ ಮಾಡಿದ್ದಕ್ಕಾಗಿ ಅಸ್ಸಾಂ ಯುತ್ ಕಾಂಗ್ರೆಸ್ ಮುಖ್ಯಸ್ಥೆಯಾಗಿದ್ದ ಡಾ. ಅಂಕಿತಾ ದತ್ತಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿ ಕಾಂಗ್ರೆಸ್ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ತಾರೀಕ್ ಅನ್ವರ್ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದಲೂ ಅಂಕಿತಾ ದತ್ತಾ ಅವರು ಶ್ರೀನಿವಾಸ್ ಬಿವಿ ಮತ್ತು ವರ್ಧನ್ ಯಾದವ್ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ‘‘ಕಳೆದ 6ತಿಂಗಳಿಂದಲೂ ಶ್ರೀನಿವಾಸ್ ಬಿವಿ ಅವರಿಂದ ನಾನು ಕಿರುಕುಳಕ್ಕೆ ಒಳಗಾಗುತ್ತಿದ್ದೇನೆ. ಇತ್ತೀಚೆಗೆ ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸರ್ವಸದಸ್ಯರ ಸಮ್ಮೇಳನದಲ್ಲಿ ನನ್ನೊಂದಿಗೆ ಅವರು ಅನುಚಿತವಾಗಿ ವರ್ತಿಸಿದ್ದರು. ‘ವೋಡ್ಕಾ ಕುಡೀತಿಯಾ ಎಂದು ಕೇಳಿದ್ದರು’ ಅಷ್ಟೇ ಅಲ್ಲ, ತೋಳನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ನನ್ನ ಬಗ್ಗೆ ಪಕ್ಷದ ವರಿಷ್ಠರಿಗೆ ಹೇಳಿದ್ದೇ ಆದಲ್ಲಿ, ನಿನ್ನ ರಾಜಕೀಯ ವೃತ್ತಿ ಜೀವನವನ್ನು ಹಾಳುಗೆಡವುತ್ತೇನೆ. ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದೂ ಹೆದರಿಸಿದ್ದರು. ಅವರಿಂದ ನಾನು ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ. ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಅಂಥ ಕಮೆಂಟ್ಗಳನ್ನು ಅವರು ನನ್ನ ವಿರುದ್ಧ ಮಾಡುತ್ತಿದ್ದಾರೆ’’ ಎಂದು ಅಂಕಿತಾ ದತ್ತಾ ಮೊದಲು ಟ್ವೀಟ್ ಮಾಡಿದ್ದರು. ಬಳಿಕ ಇದೇ ವಿಷಯವನ್ನು ಉಲ್ಲೇಖಿಸಿ ಅಸ್ಸಾಂ ದಿಸ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಬಿಜೆಪಿ ಟೀಕೆ
ಹೀಗೆ ಶ್ರೀನಿವಾಸ್ ಬಿವಿ ವಿರುದ್ಧ ಆರೋಪ ಮಾಡಿದ ಅಂಕಿತಾ ದತ್ತಾಳನ್ನು ಉಚ್ಚಾಟನೆ ಮಾಡಿದ ಕ್ರಮವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟೀಕಿಸಿದ್ದಾರೆ. ‘ಇದು ಕಾಂಗ್ರೆಸ್ನ ಮಾದರಿ ಮಹಿಳಾ ಸಬಲೀಕರಣ!. ತೊಂದರೆಯಾಗುತ್ತಿದೆ ಎಂದು ಹೇಳಿದ ಮಹಿಳಾ ಪದಾಧಿಕಾರಿಯ ಕುಂದುಕೊರತೆಯನ್ನು ಆಲಿಸಲು ವ್ಯವಸ್ಥೆ ಮಾಡಿಕೊಡುವ ಬದಲು, ಅವರನ್ನು ಪಕ್ಷದಿಂದಲೇ ತೆಗೆದುಹಾಕಲಾಗಿದೆ. ಅಂಕಿತಾ ದತ್ತಾ ಅವರನ್ನು ಕಾಂಗ್ರೆಸ್ನಿಂದ ತೆಗೆದು ಹಾಕಿದ ರೀತಿ ಸರಿಯಿಲ್ಲ. ಇದು ಮಹಿಳೆಯರ ಭಾವನೆಯನ್ನು ಕುಗ್ಗಿಸುವಂತಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಹಾಗೇ ಕಾಂಗ್ರೆಸ್ಸಿಗರು ಅಂಕಿತಾ ದತ್ತಾ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಅವರು ಬಿಜೆಪಿಗೆ ಸೇರಲು ಬಯಸುತ್ತಿದ್ದಾರೆ. ಇದೇ ಕಾರಣಕ್ಕೆ ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.