ನವ ದೆಹಲಿ: ಬಿಜೆಪಿ ಕೇಂದ್ರ ಸರ್ಕಾರ ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನ(Har Ghar Tiranga)ಕ್ಕೆ ಅಚ್ಚರಿಯೆಂಬಂತೆ ಕಾಂಗ್ರೆಸ್ ಕೂಡ ಕೈ ಜೋಡಿಸಿದೆ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಬಿಜೆಪಿಯ ಹರ್ ಘರ್ ತಿರಂಗಾಕ್ಕೆ ಕಾಂಗ್ರೆಸ್, ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಟಚ್ ಕೊಟ್ಟಿದೆ. ಜತೆಗೆ ಸಚ್ ಭಾರತ್ (ಸತ್ಯ ಭಾರತ) ಎಂಬ ಟ್ಯಾಗ್‌ಲೈನ್ ಹಾಕಿದೆ. ಇದು ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ನ ಮಾರ್ಮಿಕ ಪ್ರತ್ಯುತ್ತರ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈ ಬಾರಿಯ ಮನ್ ಕೀ ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಸ್ವಾತಂತ್ರ್ಯ ಬಂದ 75ವರ್ಷಗಳಾದ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರ ಭಾಗವಾಗಿ ಆಗಸ್ಟ್ 13-15ರವರೆಗೆ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಆಚರಿಸೋಣ. ಆ ಮೂರು ದಿನ ಪ್ರತಿ ಮನೆಯ ಮೇಲೆಯೂ ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜ ಹಾರಿಸೋಣ’ ಎಂದು ಹೇಳಿದ್ದರು.
ಹಾಗೇ, ನಮ್ಮ ರಾಷ್ಟ್ರಧ್ವಜ ವಿನ್ಯಾಸಕ ಪಿಂಗಳಿ ವೆಂಕಯ್ಯನವರ ಜನ್ಮದಿನ ಆಗಸ್ಟ್ 2 ಆಗಿದ್ದರಿಂದ. ಅಂದಿನಿಂದ ಆಗಸ್ಟ್ 15ರವರೆಗೆ ನಮ್ಮೆಲ್ಲರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ಗೆ ರಾಷ್ಟ್ರಧ್ವಜದ ಫೋಟೋ ಹಾಕಿಕೊಳ್ಳೋಣ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. ಅದರಂತೆ, ಮೋದಿಯವರೂ ಈಗಾಗಲೇ ತಮ್ಮೆಲ್ಲ ಸೋಷಿಯಲ್ ಮೀಡಿಯಾ ಪ್ರೊಫೈಲ್ಗಳಲ್ಲಿ ರಾಷ್ಟ್ರಧ್ವಜದ ಫೋಟೋ ಹಾಕಿಕೊಂಡಿದ್ದಾರೆ. ಕೇಂದ್ರ ಸಚಿವರು, ಬಿಜೆಪಿ ಕಾರ್ಯಕರ್ತರು ಮತ್ತು ಸಾಮಾನ್ಯ ಜನರೂ ಕೂಡ ಖುಷಿಯಿಂದ ಪ್ರೊಫೈಲ್ ಫೋಟೋ ಬದಲಿಸಿಕೊಂಡಿದ್ದಾರೆ. ಎಲ್ಲೆಲ್ಲೂ ರಾಷ್ಟ್ರಧ್ವಜ ಕಂಗೊಳಿಸುತ್ತಿದೆ.
ಈ ಅಭಿಯಾನವನ್ನು ಕಾಂಗ್ರೆಸ್ ತನಗೆ ಬೇಕಾದರಂತೆ ರೂಪಿಸಿಕೊಂಡಿದೆ. ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಅಕೌಂಟ್ಗಳ ಪ್ರೊಫೈಲ್ ಫೋಟೋ ಬದಲಾಗಿದೆ. ಅಲ್ಲೂ ಕೂಡ ರಾಷ್ಟ್ರಧ್ವಜ ಇದೆ. ಆದರೆ ಬರೀ ರಾಷ್ಟ್ರಧ್ವಜ ಅಲ್ಲ, ಮಾಜಿ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ನಿಂತಿರುವ ಫೋಟೋವನ್ನು ಅಪ್ಲೋಡ್ ಮಾಡಿದೆ. ಎಲ್ಲ ರಾಜ್ಯಗಳ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಅಕೌಂಟ್ಗಳು, ರಾಹುಲ್ ಗಾಂಧಿ ಸೇರಿ, ಪಕ್ಷದ ಎಲ್ಲ ನಾಯಕರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ನಲ್ಲಿ ಇದೇ ಫೋಟೋ ಕಾಣಿಸುತ್ತಿದೆ.
ಪ್ರೊಫೈಲ್ ಫೋಟೋ ಬದಲಿಸಿದ ಬಳಿಕ ಟ್ವೀಟ್ ಮಾಡಿದ ಕಾಂಗ್ರೆಸ್, ‘ರಾಷ್ಟ್ರಧ್ವಜವು ಸದಾ ನಮ್ಮ ಹೃದಯದಲ್ಲಿ ಇರುತ್ತದೆ. ಅದು ಮೈಯಲ್ಲಿ ಹರಿಯುವ ರಕ್ತದಂತೆ. 1929ರ ಡಿಸೆಂಬರ್ 31ರಂದು ಪಂಡಿತ್ ನೆಹರೂ ಅವರು ರವಿ ನದಿಯ ದಡದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರು. ‘ಇಂದು ಇಲ್ಲಿ ರಾಷ್ಟ್ರಧ್ವಜ ಆರೋಹಣವಾಗಿದೆ. ಅದರ ಗೌರವಕ್ಕೆ ಎಂದಿಗೂ ಚ್ಯುತಿ ಬರಬಾರದು’ ಎಂದು ಅವತ್ತು ಅವರು ಹೇಳಿದ್ದರು. ಅದರಂತೆ, ದೇಶದ ಒಗ್ಗಟ್ಟಿನ ಪ್ರತೀಕವಾದ ತ್ರಿವರ್ಣಧ್ವಜವನ್ನೇ ನಮ್ಮ ಗುರುತಾಗಿ ಪರಿಗಣಿಸಿಕೊಳ್ಳೋಣ ಜೈ ಹಿಂದ್’ ಎಂದು ಹೇಳಿದೆ.
ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಸಹಕರಿಸಿ; ಸಚಿವ ಪ್ರಭು ಚವ್ಹಾಣ್