Site icon Vistara News

ಗುಜರಾತ್‌ ಗಲಭೆ: ತೀಸ್ತಾ ಸೆಟಲ್ವಾಡ್‌ ಪಿತೂರಿಗೆ ಬೆಂಬಲಿಸಿದ್ದು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ !

Teesta Setalvad

ನವ ದೆಹಲಿ: 2002ರ ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವೇನೂ ಇಲ್ಲ ಎಂದು ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದು, ಜೂನ್‌ ತಿಂಗಳಲ್ಲಿ ತೀರ್ಪು ನೀಡಿದ ಬೆನ್ನಲ್ಲೇ, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ವಿರುದ್ಧ ಕಾನೂನು ಕ್ರಮ ಶುರುವಾಗಿದೆ. ಅಂದಿನ ದಂಗೆ ಪ್ರಕರಣದಲ್ಲಿ ನರೇಂದ್ರ ಮೋದಿಯವರನ್ನು ಸಿಲುಕಿಸುವ ಪಿತೂರಿಯನ್ನು ಈ ತೀಸ್ತಾ ಸೆಟಲ್ವಾಡ್‌, ಅಂದಿನ ಡಿಜಿಪಿಯಾಗಿದ್ದ (ಈಗ ನಿವೃತ್ತ) ಆರ್‌.ಬಿ. ಶ್ರೀಕುಮಾರ್‌ ಮತ್ತು ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಮಾಡಿದ್ದರು ಎಂಬ ಸತ್ಯ ಹೊರಬಿದ್ದ ಬೆನ್ನಲ್ಲೇ ತನಿಖೆಯೂ ಪ್ರಾರಂಭವಾಗಿದೆ. ತೀಸ್ತಾ ಮತ್ತು ಟೀಮ್‌ ವಿಚಾರಣೆ ನಡೆಸಲು ಗುಜರಾತ್‌ ಸರ್ಕಾರ ವಿಶೇಷ ತನಿಖಾ ದಳ (SIT)ವನ್ನು ರಚಿಸಿದೆ.

ಇದೀಗ ಎಸ್‌ಐಟಿ ಇಲ್ಲಿಯವರೆಗಿನ ತನಿಖಾ ವರದಿಯನ್ನು ಅಹ್ಮದಾಬಾದ್‌ ಸೆಷನ್ಸ್‌ ಕೋರ್ಟ್‌ ಎದುರು ಅಫಿಡಿವಿಟ್‌ ರೂಪದಲ್ಲಿ ಇಟ್ಟಿದ್ದು, ಅದರಲ್ಲಿ, ʼಗಲಭೆ ಸಮಯದಲ್ಲಿ ಗುಜರಾತ್‌ನಲ್ಲಿ ಇದ್ದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಅಥವಾ ಪತನಗೊಳಿಸಲು ತೀಸ್ತಾ ಸೆಟಲ್ವಾಡ್‌ ಪಿತೂರಿ ಮಾಡಿದ್ದರು. ಹಾಗೇ, ದಂಗೆಯಲ್ಲಿ ಅಮಾಯಕರನ್ನು ಸಿಲುಕಿಸಲು ಕ್ರಿಮಿನಲ್‌ ಕೆಲಸಗಳನ್ನು ಮಾಡಿದ್ದಾರೆ. ಇದಕ್ಕಾಗಿ ತೀಸ್ತಾ ಅಲ್ಲಿನ ಪ್ರತಿಪಕ್ಷದಿಂದ ಅಕ್ರಮವಾಗಿ ಹಣಕಾಸು ನೆರವು, ಹಲವು ಸೌಲಭ್ಯಗಳು ಮತ್ತು ಸಂಭಾವನೆ ಪಡೆದಿದ್ದರು. ಪ್ರಸ್ತುತ ಕೇಸ್‌ನ ಸಾಕ್ಷಿಯೊಬ್ಬರು ಹೇಳಿರುವ ಪ್ರಕಾರ, ೨೦೦೨ರ ಗಲಭೆ ನಂತರ ತೀಸ್ತಾ 30 ಲಕ್ಷ ರೂ.ನ್ನು ಅಹ್ಮದ್‌ ಪಟೇಲ್‌ ಕಡೆಯಿಂದ ಪಡೆದಿದ್ದರುʼ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಇನ್ನೊಂದು ಮಹತ್ವದ ಸಂಗತಿಯೆಂದರೆ ಈ ಪ್ರಕರಣದಲ್ಲಿ ಈಗ ಕಾಂಗ್ರೆಸ್‌ ನಾಯಕ, ದಿವಂಗತ ಅಹ್ಮದ್‌ ಪಟೇಲ್‌ ಹೆಸರೂ ಕೇಳಿಬಂದಿದೆ.

ಇದನ್ನೂ ಓದಿ: ವಿದೇಶಿ ದೇಣಿಗೆ ಪ್ರಕರಣ; ಗುಜರಾತ್‌ ಎಟಿಎಸ್‌ನಿಂದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಬಂಧನ

ʼತೀಸ್ತಾ ಸೆಟಲ್ವಾಡ್‌ ಅವರು ಅಂದಿನ ಗುಜರಾತ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದ್ದು, ದಿವಂಗತ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಆಜ್ಞೆಯ ಮೇರೆಗೆ. ಅಹ್ಮದ್‌ ಪಟೇಲ್‌ ಅವರು 2002ರಲ್ಲಿ ಇದ್ದ ಬಿಜೆಪಿ ಸರ್ಕಾರವನ್ನು ಪತನಗೊಳಿಸಲು ಈ ತೀಸ್ತಾ ಸೆಟಲ್ವಾಡ್‌, ಆರ್‌.ಬಿ. ಶ್ರೀಕುಮಾರ್‌ ಮತ್ತು ತೀಸ್ತಾ ಸೆಟಲ್ವಾಡ್‌ ಸಹಾಯ ಪಡೆದಿದ್ದಾರೆ. ಇವರಿಗೆ ಬೆಂಬಲವಾಗಿ ಪಟೇಲ್‌ ನಿಂತಿದ್ದರು. ಅದರಲ್ಲೂ ಈ ತೀಸ್ತಾ ಸೆಟಲ್ವಾಡ್‌, ಗಲಭೆ ಬಳಿಕ ಹಲವು ಬಾರಿ ದೆಹಲಿಗೆ ಹೋಗಿ ಪ್ರಮುಖ ರಾಜಕೀಯ ಪಕ್ಷವೊಂದರ ನಾಯಕರನ್ನು ಪದೇಪದೆ ಭೇಟಿಯಾಗಿದ್ದಾರೆʼ ಎಂದೂ ಎಸ್‌ಐಟಿ ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಹಾಗೇ, ತೀಸ್ತಾ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪುರಸ್ಕರಿಸಬಾರದು. ಅವರಿಗೆ ಬೇಲ್‌ ಕೊಡಬಾರದು ಎಂದೂ ಕೋರ್ಟ್‌ಗೆ ಹೇಳಿದೆ. ಇದೀಗ ಎಸ್‌ಐಟಿ ನೀಡಿರುವ ವರದಿಯನ್ನು ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಡಿಡಿ ಥಕ್ಕರ್‌ ಅವರು ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಗಲಭೆ: ಫೋರ್ಜರಿ, ಪಿತೂರಿ ಮಾಡಿದ್ದ ತೀಸ್ತಾ ಸೆಟಲ್ವಾಡ್‌, ಶ್ರೀಕುಮಾರ್‌ ವಿರುದ್ಧ ಎಫ್‌ಐಆರ್‌

ಕಾಂಗ್ರೆಸ್‌ನಿಂದ ವಿರೋಧ
ಆದರೆ ಎಸ್‌ಐಟಿಯ ಈ ಆರೋಪವನ್ನು ಕಾಂಗ್ರೆಸ್‌ ಕಟುವಾಗಿ ವಿರೋಧಿಸಿದೆ. ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ʼನರೇಂದ್ರ ಮೋದಿ ತಾವು 2002ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾದಾಗ ನಡೆದ ಕೋಮು ಗಲಭೆ, ಹತ್ಯಾಕಾಂಡದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂಬುದನ್ನು ಸಾಬೀತು ಪಡಿಸಲು ಹೀಗೆ ವ್ಯವಸ್ಥಿತ ತಂತ್ರವನ್ನು ಮಾಡುತ್ತಿದ್ದಾರೆ. ಅಂದು ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ ನಡೆಯುತ್ತಿರುವ ಗಲಭೆ, ಹತ್ಯೆಯನ್ನು ನಿಲ್ಲಿಸಲು ಅವರಿಗೆ ಇಷ್ಟವಿರಲಿಲ್ಲ ಮತ್ತು ಸಂಪೂರ್ಣವಾಗಿ ಅಸಮರ್ಥರಾಗಿದ್ದರು. ಅದಕ್ಕಾಗಿಯೇ, ಅಂದಿನ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ನರೇಂದ್ರ ಮೋದಿಗೆ ರಾಜಧರ್ಮ ನೆನಪಿಸಿದ್ದರು. ಎಸ್‌ಐಟಿ ಕೂಡ ತನ್ನ ರಾಜಕೀಯ ನಾಯಕನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅವರು ಏನು ಹೇಳುತ್ತಾರೋ ಅದನ್ನೇ ಮಾಡುತ್ತಿದೆ. ಈ ಹಿಂದೆ ನರೇಂದ್ರ ಮೋದಿಗೆ ಕ್ಲೀನ್‌ ಚಿಟ್‌ ಕೊಟ್ಟಿದ್ದ ಎಸ್‌ಐಟಿ ಮುಖ್ಯಸ್ಥನಿಗೆ ಯಾವೆಲ್ಲ ಹುದ್ದೆ-ಸೌಕರ್ಯ ಕೊಡಲಾಯಿತು ಎಂಬುದು ನಮಗೆ ಗೊತ್ತಿದೆʼ ಎಂದು ಹೇಳಿದೆ. ಈ ಎಲ್ಲ ಆರೋಪಗಳೂ ಕೂಡ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ತಂತ್ರಗಳು ಎಂದು ಆರೋಪಿಸಿದೆ.

ಇದನ್ನೂ ಓದಿ: ಗುಜರಾತ್‌ ಗಲಭೆ ಪ್ರಕರಣದ ತನಿಖೆಗೆ ಅಸಹಕಾರ, ತೀಸ್ತಾ ಸೆಟಲ್ವಾಡ್‌ ಜುಲೈ 1ರ ತನಕ ಪೊಲೀಸ್‌ ಕಸ್ಟಡಿಗೆ

Exit mobile version