ನವ ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ ಬಳಿಕ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ರಾಷ್ಟ್ರಪತಿಯಾಗಿ ತಮ್ಮ ಚೊಚ್ಚಲ ಭಾಷಣದಲ್ಲಿ ಅವರು ತಮ್ಮ ಬಾಲ್ಯದಿಂದ ಹಿಡಿದು, ಆಜಾದಿ ಕಾ ಅಮೃತ ಮಹೋತ್ಸವದವರೆಗೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅವರ ಈ ಚೊಚ್ಚಲ ಭಾಷಣವನ್ನು ರಾಜಸ್ಥಾನ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ತುಂಬ ಮೆಚ್ಚಿಕೊಂಡಿದ್ದಾರೆ. “ದ್ರೌಪದಿ ಮುರ್ಮು ಮಾತನಾಡಿದ ಪ್ರತಿ ಶಬ್ದವೂ ಅರ್ಥಪೂರ್ಣವಾಗಿದೆ. ಅವರ ಮಾತುಗಳಿಂದ ನಾನು ತುಂಬ ಪ್ರಭಾವಿತನಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಇಂದು ರಾಷ್ಟ್ರಪತಿ ಹುದ್ದೆಗೆ ಏರಿದ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದಿಂದ ಬಂದವರು. ಈ ಬಾರಿಯ ಚುನಾವಣೆಯಲ್ಲಿ ಕೂಡ ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ನಾಯಕರ 143 ಮತಗಳನ್ನು ಪಡೆದಿದ್ದಾರೆ. ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಯಶವಂತ್ ಸಿನ್ಹಾರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡಿದ್ದರೂ ಕೂಡ, 18 ರಾಷ್ಟ್ರಗಳಿಂದ ಒಟ್ಟು 143 ಶಾಸಕರು/ಸಂಸದರು ದ್ರೌಪದಿ ಮುರ್ಮುಗೆ ಅಡ್ಡಮತದಾನ ಮಾಡಿದ್ದರು. ಅದೂ ಕೂಡ ಬುಡಕಟ್ಟು ಜನಾಂಗ ಹೆಚ್ಚಾಗಿರುವ ರಾಜ್ಯಗಳಿಂದಲೇ ಈ ಅಡ್ಡಮತದಾನ ಆಗಿತ್ತು. ಅವರು ಚುನಾವಣೆಯಲ್ಲಿ ಗೆದ್ದ ಬಳಿಕವೂ ಪ್ರತಿಪಕ್ಷಗಳ ಬಹುತೇಕ ಎಲ್ಲ ನಾಯಕರೂ ಅವರನ್ನು ಅಭಿನಂದಿಸಿದ್ದರು.
ಇಂದು ಚೊಚ್ಚಲ ಭಾಷಣ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ʼಒಬ್ಬರು ಬುಡಕಟ್ಟು ಜನಾಂಗದಿಂದ ಬಂದ ಮಹಿಳೆ ಇವತ್ತು ಆಡಿದ ಮಾತುಗಳು ಶ್ಲಾಘನೀಯ. ದೇಶದ ಬಗ್ಗೆ ತಮಗಿರುವ ಬದ್ಧತೆಯನ್ನು ಅವರಿಂದು ಹೇಳಿಕೊಂಡರು. ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಂತೂ ಖಂಡಿತ ಇದೆʼ ಎಂದು ಹೇಳಿದರು.
ದ್ರೌಪದಿ ಮುರ್ಮುಗೆ ಈಗ 64 ವರ್ಷ. ಭಾರತದಲ್ಲಿ ಇದುವರೆಗೆ ರಾಷ್ಟ್ರಪತಿ ಹುದ್ದೆಗೆ ಏರಿದವರು ಯಾರೂ ಇಷ್ಟು ಚಿಕ್ಕ ವಯಸ್ಸಿಗೇ ಆ ಸ್ಥಾನವನ್ನು ಅಲಂಕರಿಸಿರಲಿಲ್ಲ. ಇಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ದ್ರೌಪದಿ ಮುರ್ಮು ತಮ್ಮ ಗೆಲುವು ಕೇವಲ ನನ್ನೊಬ್ಬನ ಸಾಧನೆಯಲ್ಲ . ಇದು ಈ ದೇಶದ ಕೋಟ್ಯಂತರ ಬಡವರು, ಹಿಂದುಳಿದ ವರ್ಗದವರ ಯಶಸ್ಸು ಎಂದು ಹೇಳಿದ್ದರು. ಹಾಗೇ, “ಒಂದು ಬಡ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಮಹಿಳೆ ಈ ದೇಶದ ಅತ್ಯುನ್ನತ ಹುದ್ದೆಗೆ ಏರಲು ಸಾಧ್ಯವಾಗಿದ್ದಕ್ಕೆ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆ” ಎಂದಿದ್ದರು.
ಇದನ್ನೂ ಓದಿ: Draupadi Murmu | ಅಮೃತಕಾಲದಲ್ಲಿ ರಾಷ್ಟ್ರಪತಿ ಹುದ್ದೆ ಕೊಟ್ಟಿದ್ದಕ್ಕೆ ಧನ್ಯವಾದಗಳು: ದ್ರೌಪದಿ ಮುರ್ಮು