ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ರದ್ದುಗೊಳಿಸಿದ ಬೆನ್ನಲ್ಲೇ ದೇಶಾದ್ಯಂತ ಕಾಂಗ್ರೆಸ್ ಪ್ರಮುಖರು ಸಿಡಿಮಿಡಿ ಎನ್ನುತ್ತಿದ್ದಾರೆ. ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ ಮಧ್ಯಪ್ರದೇಶದ ಭೋಪಾಲ್ನ ಪೊಲೀಸ್ಸ್ಟೇಶನ್ವೊಂದರಲ್ಲಿ ಕಾಂಗ್ರೆಸ್ ನಾಯಕ ಮನೋಜ್ ಶುಕ್ಲಾ ಮತ್ತು ಇನ್ನಿತರ ಕೆಲವು ಪ್ರಮುಖರೆಲ್ಲ ಸೇರಿ ಹೈಡ್ರಾಮಾವನ್ನೇ ಮಾಡಿದ್ದಾರೆ. ಬಳಿಕ ಅಲ್ಲಿಂದ ಪೊಲೀಸರು ಅವರನ್ನು ಕಳಿಸಿದ್ದಾರೆ.
ಮನೋಜ್ ಶುಕ್ಲಾ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ಪೊಲೀಸ್ ಸ್ಟೇಶನ್ಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ನೀಡಿದ್ದಾರೆ. ಮೋದಿಯವರು ಹಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಅವಹೇಳನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಂಪ್ಲೇಂಟ್ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಸ್ ದಾಖಲು ಮಾಡಲು ನಿರಾಕರಿಸಿದ್ದಾರೆ. ನಾವು ಕೇಸ್ ಹಾಕುವುದಿಲ್ಲ, ಆದರೆ ನೀವು ಹೇಳಿದ ವಿಷಯದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆಗ ಮನೋಜ್ ಶುಕ್ಲಾ ಜೋರಾಗಿ ಯಾಕೆ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಳಿದ್ದಾರೆ. ಕೆಲ ಕಾಲ ಪೊಲೀಸ್ ಮತ್ತು ಮನೋಜ್ ಶುಕ್ಲಾ ನಡುವೆ ವಾಗ್ವಾದವೂ ನಡೆಯಿತು. ಪೊಲೀಸರ ವಿರುದ್ಧವೇ ಅವರು ಘೋಷಣೆ ಕೂಗಲು ಪ್ರಾರಂಭಿಸಿದರು. ಬಳಿಕ ಕಾಂಗ್ರೆಸ್ ನಾಯಕರನ್ನು ಅಲ್ಲಿಂದ ಕಳಿಸಲಾಗಿದೆ. ಈ ವಿಡಿಯೊವನ್ನು ಮಧ್ಯಪ್ರದೇಶ ಕಾಂಗ್ರೆಸ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
2019ರಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ, ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಶುರುವಾಗುತ್ತದಲ್ಲ, ಯಾಕೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಕೇಸ್ನಲ್ಲಿ ದೋಷಿ ಎಂದು ಮಾರ್ಚ್ 23ರಂದು ಸೂರತ್ ಕೋರ್ಟ್ ತೀರ್ಪು ಕೊಟ್ಟಿದೆ. ರಾಹುಲ್ ಗಾಂಧಿಗೆ 2ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸದ್ಯ ಜಾಮೀನು ಪಡೆದು ಹೊರಗೆ ಇರುವ ರಾಹುಲ್ ಗಾಂಧಿಯನ್ನು ಲೋಕಸಭೆ ಸದಸ್ಯನ ಸ್ಥಾನದಿಂದಲೂ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್ ಈ ಕ್ರಮವನ್ನು ವಿರೋಧಿಸುತ್ತಿದ್ದು, ಸೋಮವಾರದಿಂದ ದೇಶದ ಎಲ್ಲೆಡೆ ದೊಡ್ಡಮಟ್ಟದಲ್ಲಿ ಆಂದೋಲನ ನಡೆಸುವುದಾಗಿ ಹೇಳಿದೆ. ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರ ವಯಾನಾಡ್ನಲ್ಲಿ ಇಂದು ಕರಾಳ ದಿನ ಆಚರಣೆ ಮಾಡಲಾಗಿದೆ.