Site icon Vistara News

ತೀವ್ರ ನಿರಾಸೆ; ಬಿಜೆಪಿ ಅಭ್ಯರ್ಥಿ ಬೆಂಬಲಿಸುತ್ತೇನೆಂದು ಪ್ರಿಯಾಂಕಾ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್‌ ನಾಯಕ

Nawab Kazim Ali Khan

ಲಖನೌ: ಉತ್ತರ ಪ್ರದೇಶದ ರಾಂಪುರ ಮತ್ತು ಅಜಂಗಢ್‌ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇರಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ.‌ ಈಗ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಇಳಿಸುವ ಬದಲು, ಮುಂಬರುವ 2024ರ ಲೋಕಸಭಾ ಚುನಾವಣೆಗಾಗಿ ಈಗಿನಿಂದಲೇ ಸಿದ್ಧತೆ ಆರಂಭ ಮಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಯೋಚನೆಯನ್ನು ಕಾಂಗ್ರೆಸ್‌ ಮಾಡಿದೆ. ಆದರೆ ರಾಂಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಬೇಕು ಎಂದು ಬಹುವಾಗಿ ಆಸೆಯಿಟ್ಟುಕೊಂಡಿದ್ದ ನವಾಬ್‌ ಖಾಜಿಮ್‌ ಅಲಿ ಖಾನ್‌ರಿಗೆ ಇದು ತೀವ್ರ ನಿರಾಸೆ ತಂದಿದೆ. ಅವರೀಗ ರಾಂಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಘನಶ್ಯಾಮ ಸಿಂಗ್‌ ಲೋಧಿಯವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಪ್ರಧಾನಕಾರ್ಯದರ್ಶಿ, ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಪತ್ರ ಬರೆದು, ಕ್ಷಮೆಯನ್ನೂ ಕೋರಿದ್ದಾರೆ.

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಂಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನವಾಬ್‌ ಖಾಜಿಮ್‌ ಅಲಿ ಖಾನ್‌ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಗೆದ್ದಿದ್ದು ಸಮಾಜವಾದಿ ಪಕ್ಷದ ಆಝಂ ಖಾನ್‌. ಈ ಆಝಂ ಖಾನ್‌ 2019ರ ಲೋಕಸಭಾ ಚುನಾವಣೆಯಲ್ಲಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದವರು 2022ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಶಾಸಕರಾಗಿ ಗೆದ್ದರು. ಹೀಗಾಗಿ ರಾಂಪುರ ಲೋಕಸಭಾ ಕ್ಷೇತ್ರ ಸ್ಥಾನ ಖಾಲಿ ಇದ್ದು ಅದಕ್ಕೀಗ ಉಪಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಂತೂ ಸೋತೆ, ಲೋಕಸಭಾ ಕ್ಷೇತ್ರದಿಂದಾದರೂ ಸ್ಪರ್ಧಿಸಿ ಗೆಲ್ಲೋಣವೆಂದುಕೊಂಡಿದ್ದ ನವಾಬ್‌ ಖಾಜಿಮ್‌ ಅಲಿ ಖಾನ್‌ಗೆ ಕಾಂಗ್ರೆಸ್‌ ನಿರ್ಧಾರದಿಂದ ನೋವಾಗಿದೆ.

ಇದನ್ನೂ ಓದಿ: Rajyasabha Election | ಕಾಂಗ್ರೆಸ್‌-ಜನತಾದಳದ ʼಆತ್ಮಸಾಕ್ಷಿʼ ಜಗಳ

ಹೀಗಾಗಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಪತ್ರ ಬರೆದಿರುವ ಖಾಜಿಮ್‌, ʼಜೂ. 23 ರಂದು ನಡೆಯಲಿರುವ ರಾಂಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಬೇಕು ಎಂಬ ಆಸೆಯಿತ್ತು. ಆದರೆ ಈ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಪಕ್ಷದೊಳಗಿನ ಕೆಲವರು ನಿಮಗೆ ಮನವರಿಕೆ ಮಾಡಿ, ಒಪ್ಪಿಸಿದ್ದಾರೆ. ಉತ್ತರ ಪ್ರದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ ವಿರುದ್ಧವಾಗಿಯೇ ಸನ್ನಿವೇಶಗಳು ಇದ್ದವು. ಹಾಗಿದ್ದಾಗ್ಯೂ ನಾನು 2022ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಈಗಲೂ ಸ್ಪರ್ಧಿಸುವ ಆಸೆ ಹೊಂದಿದ್ದೆ. ಆದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ನಾನು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಮತ ಹಾಕುವುದು ನನ್ನ ಆಯ್ಕೆ. ಹಾಗಂತ ನಾನು ಕಾಂಗ್ರೆಸ್‌ ಬಿಡುವುದಿಲ್ಲ. ಪಕ್ಷದಲ್ಲಿದ್ದುಕೊಂಡೇ ಬಿಜೆಪಿಗೆ ಮತ ಹಾಕುತ್ತೇನೆʼ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಅಜಂಗಢ್‌ ಲೋಕಸಭಾ ಕ್ಷೇತ್ರವೂ ಖಾಲಿಯಿದೆ. ಈ ಕ್ಷೇತ್ರದ ಸಂಸದರಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ 2022ರ ವಿಧಾನಸಭೆ ಚುನಾವಣೆಯಲ್ಲಿ ಖರ್ಹಾಲ್‌ ಕ್ಷೇತ್ರದಿಂದ ಗೆದ್ದಿದ್ದಾರೆ. ಶಾಸಕ ಮತ್ತು ಸಂಸದನ ಸ್ಥಾನದ ಆಯ್ಕೆ ಬಂದಾಗ ಅವರು ಆಜಂಗಢ್‌ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅಲ್ಲಿಯೂ ಜೂ.23 ರಂದು ಉಪಚುನಾವಣೆ ನಡೆಯಲಿದೆ. ಎರಡೂ ಕ್ಷೇತ್ರಗಳ ಫಲಿತಾಂಶ ಜೂ.26ಕ್ಕೆ ಹೊರಬೀಳಲಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಈ ಬಾರಿ ರಸ್ತೆಯಲ್ಲಿ ನಮಾಜ್‌ ನಡೆದಿಲ್ಲ: ಇತಿಹಾಸದಲ್ಲೆ ಮೊದಲು

Exit mobile version