ನವ ದೆಹಲಿ: ಸುದ್ದಿಗೋಷ್ಠಿಯಲ್ಲಿ ಗೌತಮ್ ಅದಾನಿ ಷೇರು ಕುಸಿತದ ವಿಚಾರ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿಯವರನ್ನು ‘ನರೇಂದ್ರ ಗೌತಮದಾಸ್ ಮೋದಿ’ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ, ವಕ್ತಾರ ಪವನ್ ಖೇರಾ (Pawan Khera) ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
‘ಕಾನೂನು ಯಾವತ್ತೂ ಮೇಲುಗೈ ಸ್ಥಾಪಿಸುತ್ತದೆ. ಆರೋಪಿ (ಪವನ್ ಖೇರಾ) ಬೇಷರತ್ ಕ್ಷಮೆ ಕೇಳಿದ್ದಾರೆ. ಸಾರ್ವಜನಿಕ ಸ್ಥಳಗಳಿಗೆ ಪಾವಿತ್ರ್ಯತೆ ಇದೆ. ಅಲ್ಲಿ ರಾಜಕೀಯ ಭಾಷಣ ಮಾಡುವಾಗ ಅನಾಗರಿಕ ಶಬ್ದ ಪ್ರಯೋಗ ಮಾಡಿ ಪಾವಿತ್ರ್ಯತೆ ಹಾಳುಗೆಡವಬಾರದು. ಅಸ್ಸಾಂ ಪೊಲೀಸರು ಈ ವಿಚಾರವನ್ನು ಮುಂದುವರಿಸಿ, ಅದಕ್ಕೊಂದು ತಾರ್ಕಿಕ ಅಂತ್ಯ ನೀಡುತ್ತಾರೆ’ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟ್ವೀಟ್:
ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಅದಾನಿ ವಿಷಯ ಪ್ರಸ್ತಾಪಿಸಿ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ನರೇಂದ್ರ ದಾಮೋದರ್ ದಾಸ್ ಅಲ್ಲ, ನರೇಂದ್ರ ಗೌತಮ್ ದಾಸ್ ಮೋದಿ ಎಂದು ವಂಗ್ಯವಾಡಿದ್ದರು. ಹೀಗೆ ಅವಹೇಳನ ಮಾಡಿದ ಪವನ್ ಖೇರಾ ವಿರುದ್ಧ ಅಸ್ಸಾಂನಲ್ಲಿ ಎಫ್ಐಆರ್ ದಾಖಲಾಗಿತ್ತು. ಫೆ.23ರಂದು ಪವನ್ ಖೇರಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಒಳಗೊಂಡ ನಿಯೋಗ ಛತ್ತೀಸ್ಗಢ್ನ ರಾಯ್ಪುರಕ್ಕೆ ಹೊರಟಿದ್ದ ಸಂದರ್ಭದಲ್ಲಿ ದೆಹಲಿ ಏರ್ಪೋರ್ಟ್ನಲ್ಲಿ ದೆಹಲಿ ಪೊಲೀಸರು ಖೇರಾರನ್ನು ತಡೆದಿದ್ದರು. ಇಂಡಿಗೊ ವಿಮಾನ ಹತ್ತಿ ಕುಳಿತದ್ದ ಅವರನ್ನು ಕೆಳಗೆ ಇಳಿಸಿ, ನಂತರ ಅಸ್ಸಾಂ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ತತ್ಕ್ಷಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ‘ನಾನು ಬಾಯ್ತಪ್ಪಿನಿಂದ ಹಾಗೆ ಹೇಳಿದೆ’ ಎಂದು ಪವನ್ ಖೇರಾ ಕೋರ್ಟ್ನಲ್ಲಿ ಹೇಳಿದ್ದರು. ಅವರ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಪವನ್ ಖೇರಾರಿಗೆ ಮಧ್ಯಂತರ ಜಾಮೀನು ನೀಡಿತ್ತು.
ಇದನ್ನೂ ಓದಿ: Pawan Khera: ಪವನ್ ಖೇರಾ ಬಂಧನವು ಸರ್ವಾಧಿಕಾರಿ ಧೋರಣೆ; ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ: ಡಾ. ಶಂಕರ್ ಗುಹಾ ಕಿಡಿ