ನವ ದೆಹಲಿ: ಮಾರ್ಚ್ 13ರಿಂದ ಸಂಸತ್ತಿನಲ್ಲಿ ಎರಡನೇ ಹಂತದ ಬಜೆಟ್ ಅಧಿವೇಶನ ಶುರುವಾಗಿದ್ದು, ಇಷ್ಟುದಿನಗಳ ಕಲಾಪವೆಲ್ಲ ರಾಹುಲ್ ಗಾಂಧಿ (Rahul Gandhi)ಯವರು ಲಂಡನ್ನಲ್ಲಿ ಭಾರತದ ವಿರುದ್ಧ ನೀಡಿದ ಹೇಳಿಕೆಯ ಗಲಾಟೆಯಲ್ಲೇ ಕಳೆದುಹೋಗಿದೆ. ರಾಹುಲ್ ಗಾಂಧಿ ಲಂಡನ್ನಲ್ಲಿ ಮಾತನಾಡುವಾಗ ಭಾರತದ ಪ್ರಜಾಪ್ರಭುತ್ವವನ್ನು ಅವಹೇಳನ ಮಾಡಿದ್ದಾರೆ. ಅವರು ಈ ಬಗ್ಗೆ ಕ್ಷಮೆ ಕೋರಬೇಕು ಎಂದು ಬಿಜೆಪಿ ಕೇಂದ್ರ ಸಚಿವರು/ಸಂಸದರು ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಆಗ್ರಹ ಮಾಡುತ್ತಿದ್ದಾರೆ.ಇಷ್ಟೆಲ್ಲದರ ಮಧ್ಯೆ ಇಂದು ರಾಹುಲ್ ಗಾಂಧಿ ಸಂಸತ್ತಿಗೆ ಆಗಮಿಸಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮನವಿಯೊಂದನ್ನು ಮಾಡಿದ್ದಾರೆ.
ಲಂಡನ್ನಿಂದ ವಾಪಸ್ ಭಾರತಕ್ಕೆ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಇಂದು ಲೋಕಸಭೆಗೆ ಆಗಮಿಸಿದರು. ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ‘ನನ್ನ ವಿರುದ್ಧ ಬಿಜೆಪಿಯವರು ಮಾಡುತ್ತಿರುವ/ಮಾಡಿರುವ ಎಲ್ಲ ಆರೋಪಗಳಿಗೆ ಸದನದಲ್ಲಿ ಉತ್ತರ ಕೊಡಲು ನನಗೆ ಕಾಲಾವಕಾಶ ಕೊಡಿ’ ಎಂದು ಮನವಿ ಮಾಡಿದ್ದಾರೆ. ಅಂದರೆ ಲಂಡನ್ನಲ್ಲಿ ತಾವು ನೀಡಿದ ಹೇಳಿಕೆಗಳಿಗೆ ಸಮರ್ಥನೆ ಕೊಡಲು ರಾಹುಲ್ ಗಾಂಧಿ ಸಿದ್ಧರಾಗುತ್ತಿದ್ದಾರೆ. ಹಾಗೇ, ಅವರು ಸಂಸತ್ತಿನಿಂದ ಹೊರಬಂದ ಬಳಿಕ ಮಾಧ್ಯಮದವರು ‘ನೀವು ಲಂಡನ್ನಲ್ಲಿ ನೀಡಿದ ಹೇಳಿಕೆ ತಪ್ಪೆಂದು ಕ್ಷಮೆ ಕೇಳುತ್ತೀರಾ’ ಎಂದು ಪ್ರಶ್ನಿಸಿದಾಗ ರಾಹುಲ್ ಗಾಂಧಿ ಸುಮ್ಮನೆ ಒಂದು ನಗೆ ಬೀರಿದ್ದಾರೆ.
ಇದನ್ನೂ ಓದಿ: Rahul Gandhi : ವಿದೇಶಿ ಮಹಿಳೆಗೆ ಹುಟ್ಟಿದವ ಭಾರತೀಯನಾಗಲಾರ, ರಾಹುಲ್ ಗಾಂಧಿ ವಿರುದ್ಧ ಪ್ರಜ್ಞಾ ಠಾಕೂರ್ ಕಿಡಿ
ಅಷ್ಟಲ್ಲದೆ, ಮಾಧ್ಯಮದವರ ಬಳಿ ಮಾತನಾಡಿ ‘ನಾನು ಲಂಡನ್ನಲ್ಲಿ ಏನೂ ತಪ್ಪು ಮಾತನಾಡಲಿಲ್ಲ. ಭಾರತದ ವಿರುದ್ಧ ಏನೂ ಹೇಳಿಕೆ ನೀಡಿಲ್ಲ. ಸಂಸತ್ತಿನಲ್ಲಿ ಸ್ಪೀಕರ್ ಅವಕಾಶ ಕೊಟ್ಟಿದ್ದೇ ಆದರೆ, ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ’ ಎಂದು ಹೇಳಿದ್ದಾರೆ.