ನವ ದೆಹಲಿ: ದಶಕಗಳಿಂದ ಕಾಂಗ್ರೆಸ್ ಬೆನ್ನಿಗೆ ಅಂಟಿದ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಜಾರಿ ನಿರ್ದೇಶನಾಲಯ ಸುಮಾರು ಹತ್ತು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿತು. ಬೆಳಗ್ಗಿನಿಂದ ರಾತ್ರಿವರೆಗೂ ವಿಚಾರಣೆ ನಡೆಸಿದ ಅಧಿಕಾರಿಗಳು ಮಂಗಳವಾರ ಮತ್ತೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ನಡುವೆ, ರಾಹುಲ್ ಗಾಂಧಿ ಅವರು ಇ.ಡಿ ವಿಚಾರಣೆಗೆ ಹಾಜರಾಗುವ ಸನ್ನಿವೇಶಕ್ಕೆ ಪ್ರತಿಭಟನಾ ಸ್ವರೂಪವನ್ನು ನೀಡುವ ಮೂಲಕ ಇದು ರಾಷ್ಟ್ರಮಟ್ಟದ ವಿಚಾರ ಆಗುವಂತೆ ಕಾಂಗ್ರೆಸ್ ನೋಡಿಕೊಂಡಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿ ದೊಡ್ಡ ಮಟ್ಟದ ಹಣ ಲೇವಾದೇವಿ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ಅವರಿಗೆ ಇ.ಡಿ ಜೂನ್ 1ರಂದು ಸಮನ್ಸ್ ಜಾರಿಗೊಳಿಸಿತ್ತು. ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರಿಗೆ ಜೂನ್ 23ರಂದು ಹಾಜರಾಗಲು ಅವಕಾಶ ನೀಡಲಾಗಿದೆ. ರಾಹುಲ್ ಗಾಂಧಿ ಕೂಡಾ ಊರಲ್ಲಿ ಇಲ್ಲದ ಪ್ರಯುಕ್ತ ಹಾಜರಾತಿ ದಿನಾಂಕವನ್ನು ಜೂನ್ 13ಕ್ಕೆ ಮರು ನಿಗದಿ ಮಾಡಲಾಗಿತ್ತು.
ರಾಹುಲ್ ಗಾಂಧಿ ಅವರು ದಿಲ್ಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇ.ಡಿ ಕಚೇರಿಗೆ ಒಂಟಿಯಾಗಿ ಹೋಗದೆ ಬೃಹತ್ ಮೆರವಣಿಗೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುವ ಮೂಲಕ ಇ.ಡಿ. ಸಮನ್ಸ್ ಒಂದು ರಾಜಕೀಯ ಪ್ರೇರಿತ ಘಟನೆ, ಅದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ ಎಂಬ ಸಂದೇಶವನ್ನು ನೀಡಿದರು. ಬೆಳಗ್ಗೆ 11.10ಕ್ಕೆ ಅವರು ಕಾಲ್ನಡಿಗೆಯಲ್ಲಿ ಇ.ಡಿ ಕಚೇರಿ ತಲುಪಿದಾಗ ಅವರ ಜತೆ ಸೋದರಿ ಪ್ರಿಯಾಂಕಾ ವಾದ್ರಾ, ಪ್ರಮುಖ ನಾಯಕರು ಮತ್ತು ನೂರಾರು ಕಾರ್ಯಕರ್ತರು ಇದ್ದರು.
ಕಾಂಗ್ರೆಸ್‌ನಿಂದ ತೀವ್ರ ವಿರೋಧ
ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ರಾಹುಲ್ ಗಾಂಧಿ ಆರೋಪಿಯಲ್ಲ. ಅವರ ವಿರುದ್ಧ ವಿಚಾರಣೆ ನಡೆಸಬಾರದು. ಇದೆಲ್ಲ ಕೇಂದ್ರ ಸರ್ಕಾರದ ಪಿತೂರಿ. ಪ್ರತಿಪಕ್ಷಗಳನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ತನಿಖಾ ದಳಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ರಾಹುಲ್ ಗಾಂಧಿ-ಸೋನಿಯಾ ಗಾಂಧಿ ವಿರುದ್ಧ ಇ.ಡಿ. ವಿಚಾರಣೆ ಶುರುವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಹೀಗಾಗಿ ಇಂದು ಸತ್ಯಾಗ್ರಹ ಮೆರವಣಿಗೆಯನ್ನೂ ಆ ಪಕ್ಷ ಹಮ್ಮಿಕೊಂಡಿತ್ತು.
ಇದನ್ನೂ ಓದಿ: Video: ಕಾಲ್ನಡಿಗೆಯಲ್ಲೇ ಇ ಡಿ ಕಚೇರಿಗೆ ಹೋದ ರಾಹುಲ್ ಗಾಂಧಿ; ಅವರ ಜತೆ ಕಾರ್ಯಕರ್ತರ ದಂಡು!
ಇಂದು ಎಐಸಿಸಿ ಪ್ರಧಾನ ಕಚೇರಿಯಿಂದ ಇ.ಡಿ. ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್ ನಾಯಕರಿಗೆ ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ಇ.ಡಿ. ಕಚೇರಿ ಆವರಣದಲ್ಲೂ ಸೆಕ್ಷನ್ 144 ಜಾರಿಯಾಗಿತ್ತು. ಆದರೂ ಸಹ ಇಂದು ನೂರಾರು ಕಾರ್ಯಕರ್ತರು, ಪ್ರಮುಖ ನಾಯಕರು ಪ್ರತಿಭಟನೆ ನಡೆಸಿದರು. ಮೆರವಣಿಗೆ ಮಧ್ಯ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗೆ ಪೊಲೀಸರು ವಶಕ್ಕೆ ಪಡೆದ ರಣದೀಪ್ ಸಿಂಗ್ ಸುರ್ಜೇವಾಲಾ, ಹರೀಶ್ ರಾವತ್ ಸೇರಿ ಪ್ರಮುಖ ರಾಜಕೀಯ ಪ್ರಮುಖರೆಲ್ಲ ಸದ್ಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಇದ್ದು, ಅವರನ್ನು ಭೇಟಿಯಾಗಲು ಮಲ್ಲಿಕಾರ್ಜುನ್ ಖರ್ಗೆ, ಅಶೋಕ್ ಗೆಹ್ಲೋಟ್ ಮತ್ತಿತರರು ಅಲ್ಲಿಗೆ ಹೋಗಿದ್ದಾರೆ. ಬಂಧಿತ ನಾಯಕರೆಲ್ಲ ಸ್ಟೇಶನ್‌ನಲ್ಲಿ ಕುಳಿತು ರಘುಪತಿ ರಾಘವ ರಾಜಾರಾಮ್ ಗೀತೆ ಹಾಡುತ್ತಿದ್ದರು.
ಮಧ್ಯಾಹ್ನವೂ ಮುಂದುವರಿದ ವಿಚಾರಣೆ
ರಾಹುಲ್ ಗಾಂಧಿಯವರನ್ನು ಬೆಳಗ್ಗೆ 11.10ರಿಂದ ಮಧ್ಯಾಹ್ನ 2.10ರವರೆಗೆ ಇ ಡಿ ಅಧಿಕಾರಿಗಳು ನಿರಂತರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಅದಾದ ನಂತರ ಅವರಿಗೆ ಊಟದ ಬ್ರೇಕ್ ನೀಡಲಾಯಿತು. ಇದೇ ಬಿಡುವಿನಲ್ಲಿ ರಾಹುಲ್ ಗಾಂಧಿ ಗಂಗಾ ರಾಮ್ ಆಸ್ಪತ್ರೆಗೆ ತೆರಳಿ, ಅಲ್ಲಿ ದಾಖಲಾಗಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಮಧ್ಯಾಹ್ನ 3.30ರಿಂದ ಮತ್ತೆ ವಿಚಾರಣೆ ಮರು ಆರಂಭವಾಗಿ ರಾತ್ರಿ 9.30ರವರೆಗೂ ಮುಂದುವರಿಯಿತು.
ಓಡಿದ ಶ್ರೀನಿವಾಸ್ !
ಇಷ್ಟೆಲ್ಲ ಗಂಭೀರ ವಿಷಯಗಳ ಮಧ್ಯೆ ಫನ್ನಿಯಾಗಿ ಕಾಣುತ್ತಿರುವುದು ಯುತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರದ್ದೊಂದು ವಿಡಿಯೋ. ಇವರೂ ಕೂಡ ಕಾಂಗ್ರೆಸ್‌ನ ಸತ್ಯಾಗ್ರಹ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದರು. ಅಲ್ಲಿ ಪೊಲೀಸರು ಇವರನ್ನು ವಶಕ್ಕೆ ಪಡೆಯಲು ಬಂದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ, ನೆಟ್ಟಿಗರು ಶ್ರೀನಿವಾಸ್‌ರನ್ನು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಇನ್ನೂ ಮುಗಿದಿಲ್ಲ ರಾಹುಲ್ ಗಾಂಧಿ ವಿಚಾರಣೆ; ಮಧ್ಯೆ ತಾಯಿಯನ್ನು ಭೇಟಿಯಾದ ಕೈ ನಾಯಕ