Site icon Vistara News

Video: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ; ಟ್ರಕ್​​ಗಳಲ್ಲಿ ವಸ್ತುಗಳ ಸಾಗಣೆ

Congress Leader Rahul Gandhi vacate his official bungalow

#image_title

ನವ ದೆಹಲಿ: ಲೋಕಸಭಾ ಸಂಸದನ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯವರು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುತ್ತಿದ್ದಾರೆ. ಅವರ ಸರ್ಕಾರಿ ಬಂಗಲೆಯಲ್ಲಿದ್ದ ವಸ್ತುಗಳೆಲ್ಲ ಟ್ರಕ್​ಗಳಲ್ಲಿ ಸಾಗಿಸಲಾಗುತ್ತಿರುವ ವಿಡಿಯೊ ವೈರಲ್ ಆಗುತ್ತಿದೆ. 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಯಾಕೆ ಇರುತ್ತದೆ’ ಎಂದು ಕೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್​ ಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕೇಸ್​​ನ ತೀರ್ಪನ್ನು ಮಾ.23ರಂದು ಹೊರಹಾಕಿದ ನ್ಯಾಯಾಲಯ, ರಾಹುಲ್ ಗಾಂಧಿಯವರಿಗೆ 2ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅದರ ಬೆನ್ನಲ್ಲೇ ಅವರ ಲೋಕಸಭೆ ಸದಸ್ಯನ ಸ್ಥಾನವನ್ನು ರದ್ದುಗೊಳಿಸಲಾಗಿದೆ.

ರಾಹುಲ್ ಗಾಂಧಿಯ ಸಂಸದನ ಸ್ಥಾನ ರದ್ದಾಗುತ್ತಿದ್ದಂತೆ, ಅವರಿಗೆ ಸರ್ಕಾರಿ ಬಂಗಲೆಯನ್ನು ಏಪ್ರಿಲ್​ 22ರೊಳಗೆ ಖಾಲಿ ಮಾಡುವಂತೆ ಲೋಕಸಭೆ ವಸತಿ ಸಮಿತಿ ನೋಟಿಸ್ ನೀಡಿತ್ತು. ಅದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿ, ನಾನು ಕಳೆದ ನಾಲ್ಕು ಅವಧಿಯಲ್ಲಿ ಲೋಕಸಭಾ ಸದಸ್ಯನಾಗಿ ಆಯ್ಕೆಯಾದೆ. ಜನರು ಕೊಟ್ಟ ಆದೇಶಕ್ಕೆ ಬದ್ಧನಾಗಿ ಕೆಲಸ ಮಾಡಿದೆ. ಸಂಸದನಾಗಿ ಸೇವೆ ಸಲ್ಲಿಸಿದ ಇಷ್ಟು ವರ್ಷದಲ್ಲಿ ಅನೇಕ ಸಂತೋಷದ ನೆನಪುಗಳು ನನ್ನ ಪಾಲಿಗೆ ಒದಗಿವೆ. ನೀವು ನನಗೆ ಕೊಟ್ಟ ಪತ್ರದಲ್ಲಿ ಇರುವ ಆದೇಶವನ್ನು, ಯಾವುದೇ ಪೂರ್ವಾಗ್ರಹ ಪೀಡಿತನಾಗದೆ, ವಿಧೇಯನಾಗಿ ಪಾಲಿಸುತ್ತೇನೆ. ನಿಮ್ಮ ಪತ್ರಕ್ಕೆ ಧನ್ಯವಾದಗಳು ಎಂದು ಪ್ರತಿಯಾಗಿ ಲೋಕಸಭೆಗೆ ಪತ್ರ ಬರೆದಿದ್ದರು. ಅದರಂತೆ ಈಗ ದೆಹಲಿಯ ತುಘಲಕ್​ ಮಾರ್ಗದಲ್ಲಿದ್ದ ಅವರ ಬಂಗಲೆ ನಂ.12ನ್ನು ತೊರೆಯುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Rahul Gandhi: ಸ್ವಂತ ಮನೆ ಇಲ್ಲ ಎಂದ ರಾಹುಲ್‌ ಗಾಂಧಿಗೆ 4 ಅಂತಸ್ತಿನ ಮನೆ ಕೊಟ್ಟ ಕಾಂಗ್ರೆಸ್‌ ನಾಯಕಿ

ರಾಹುಲ್ ಗಾಂಧಿಯವರಿಗೆ 2005ರಲ್ಲಿ ತುಘಲಕ್​ ಲೇನ್​​ನಲ್ಲಿ ಸರ್ಕಾರಿ ಬಂಗಲೆಯನ್ನು ನೀಡಲಾಗಿತ್ತು. ಅಂದಿನಿಂದಲೂ ಅಲ್ಲಿಯೇ ವಾಸವಾಗಿದ್ದ ಅವರೀಗ, ಅಲ್ಲಿದ್ದ ವಸ್ತುಗಳೆನ್ನಲ್ಲ ತನ್ನ ತಾಯಿ ಸೋನಿಯಾ ಗಾಂಧಿಯವರ ನಂ.10 ಜನಪಥ್​ ನಿವಾಸಕ್ಕೆ ಸಾಗಿಸಿದ್ದಾರೆ. ಹೀಗೆ ಬಂಗಲೆಯನ್ನು ಸಂಪೂರ್ಣವಾಗಿ ಖಾಲಿ ಮಾಡುತ್ತಿದ್ದಂತೆ ಅವರೂ ಬಂಗಲೆಯನ್ನು ತೊರೆಯುತ್ತಾರೆ ಎಂದು ಹೇಳಲಾಗಿದೆ. ರಾಹುಲ್ ಗಾಂಧಿಯವರಿಗೆ ಖಾಸಗಿ ನಿವಾಸಗಳು ಇದ್ದರೂ ಕೂಡ ಅವರು ಎಲ್ಲಿ ಉಳಿಯುತ್ತಾರೆ ಎಂದು ಖಚಿತವಾಗಿಲ್ಲ. ತಮ್ಮ ತಾಯಿ ಸೋನಿಯಾ ಗಾಂಧಿಯವರೊಟ್ಟಿಗೆ ಅವರ ಸರ್ಕಾರಿ ಬಂಗಲೆಯಲ್ಲೇ ವಾಸವಾಗಿರಬಹುದು ಎನ್ನಲಾಗಿದೆ.

Exit mobile version